ಚಳ್ಳಕೆರೆ: ವಿಸ್ತಾರಗೊಳ್ಳುತ್ತಿರುವ ನಗರದ ಅಭಿವೃದ್ಧಿಗೆ ರಸ್ತೆ ವಿಸ್ತರಣೆ ಬಹುಮುಖ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸೋಮಗುದ್ದು ರಸ್ತೆ ಭಾಗದಲ್ಲಿ ನ್ಯಾಯಾಲಯ ಸಂಕೀರ್ಣ ಸೇರಿ ಅನೇಕ ಸರ್ಕಾರಿ ಕಚೇರಿಗಳಿವೆ. 5.5 ಮೀಟರ್ ಇರುವ ರಸ್ತೆಯನ್ನು 12.5 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಫುಟ್‌ಪಾತ್, ಡ್ರೈನೇಜ್, ರಸ್ತೆ ವಿಭಜಕ ವ್ಯವಸ್ಥೆ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದರು.
ಈಗಾಗಲೇ ಸರ್ಕಾರದ ಹಂತದಲ್ಲಿ ಅವಕಾಶ ಮಾಡಿಕೊಂಡಿರುವ 186 ಕೋಟಿ ರೂ. ಯುಜಿಡಿ ಅನುದಾನ ಜಾರಿಯಾದಲ್ಲಿ ನಗರ ವ್ಯಾಪ್ತಿಯ ಸಂಪೂರ್ಣ ರಸ್ತೆಗಳ ಅಭಿವೃದ್ಧಿ ಮತ್ತು ಒಳಚರಂಡಿಗಳ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಗರ ಸ್ವಚ್ಛತೆಗೆ ಕ್ರಮ ಕೈಗೊಂಡು ಹೊರಭಾಗದಲ್ಲಿ ತ್ಯಾಜ್ಯ ಸಂಗ್ರಹ ಘಟಕಗಳು ಸೇರಿ ನಗರ ಸೌಂದರ್ಯೀಕರಣಕ್ಕೆ ಹೆಚ್ಚಿನ ಅಗತ್ಯ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಈ.ಮಲ್ಲಿಕಾರ್ಜುನ, ತಾಪಂ ಸದಸ್ಯ ಜಿ.ವೀರೇಶ್, ಮುಖಂಡರಾದ ಬಾಬುರೆಡ್ಡಿ, ಮೆಡಿಕಲ್ ಕೇಶವ, ಟಿ.ರವಿಕುಮಾರ್, ಅತಿಕುರ್ ರೆಹಮಾನ್, ಒ.ಆಂಜನೇಯ, ಅನ್ವರ್ ಮಾಸ್ಟರ್, ಪೌರಾಯುಕ್ತ ಪಾಲಯ್ಯ, ಲೋಕೇಶ್ ಇತರರಿದ್ದರು.