ಚಳ್ಳಕೆರೆ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಂಪರೆ ಉಳಿಸಿಕೊಳ್ಳುವುದು ಸರ್ವರ ಹೊಣೆಯಾಗಿದ್ದು, ಇಂದು ಸವಾಲು ಕೆಲಸ ಆಗಿದೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.
ನೃತ್ಯ ನಿಕೇತನ ಸಂಸ್ಥೆಯ 34ನೇ ವಾರ್ಷಿಕೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಜೀವಿನಿ ಸಾಂಸ್ಕೃತಿಕ ಅಕಾಡೆಮಿಯಿಂದ ನಗರದ ವಾಸವಿ ಮಹಲ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಟ್ಯ ಕುಸುಮಾಂಜಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಶಿಕ್ಷಣದ ಪರಿಪೂರ್ಣತೆ ಪಡೆಯುವಲ್ಲಿ 64 ವಿದ್ಯೆಗಳಲ್ಲಿ ಪಾರಂಗತನಾಗಬೇಕಿತ್ತು. ಪ್ರಸ್ತುತ ಇಂತಹ ಕಠಿಣ ಪರಿಶ್ರಮ ಇಲ್ಲ. ಕಂಪ್ಯೂಟರ್ ಬಳಕೆಯಲ್ಲಿ ವೈಚಾರಿಕ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ, ಮಾನವೀಯ ಮೌಲ್ಯಗಳನ್ನು ಶಿಕ್ಷಣದೊಂದಿಗೆ ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ಹೇಳಿದರು.
ಶಿಕ್ಷಣ ಕಲಿಯುವವರಲ್ಲಿ ದೊಡ್ಡ ಪ್ರಮಾಣದ ಹಣ ಸಂಪಾದನೆ ಮಾಡುವ ಚಿಂತನೆ ಕಾಣುತ್ತೇವೆ ಹೊರತು, ನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಕಾಳಜಿ ಇಲ್ಲ. ದೈಹಿಕ ಮತ್ತು ಮಾನಸಿಕವಾಗಿ ನೆಮ್ಮದಿ ಕೊಡುವ ಸಂಗೀತ, ನೃತ್ಯ ರೂಪಕಗಳು ವಿದ್ಯಾರ್ಥಿಗಳಿಗೆ ಒಂದು ಕಲೆಯಾಗಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸುಧಾಮೂರ್ತಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲೆ ಮತ್ತು ನೃತ್ಯ ಸಂಗೀತ ಕಲಿಸುವಲ್ಲಿ ನೃತ್ಯ ನಿಕೇತನ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ತಿಳಿಸಿದರು.
ನ್ಯಾಯಾಧೀಶರಾದ ಮನುಪಾಟೀಲ್, ಕೋಟಪ್ಪ ಕಾಂಬ್ಳೆ, ನಗರಸಭೆ ಪ್ರಭಾರ ಪೌರಾಯುಕ್ತ ಪಿ.ಪಾಲಯ್ಯ, ಯು.ಎಸ್.ವಿಷ್ಣುಮೂರ್ತಿರಾವ್, ಸಾಯಿ ಪ್ರಾರ್ಥನಾ ಭಜನಾ ಮಂಡಳಿ ಅಧ್ಯಕ್ಷೆ ಅರುಣಾ ಜಗದೀಶ್, ಎಂ.ಎನ್.ಮೃತ್ಯುಂಜಯ, ಕೆ.ಎನ್.ನಿಧಿ ಮತ್ತಿತರರು ಇದ್ದರು.