ಜಿಲ್ಲೆ

ರಾಣಿಕೆರೆಗೆ ನೀರು ತುಂಬಿಸಲು ಅನುಮತಿ

Chitradurga

ಚಳ್ಳಕೆರೆ: ವಿವಿ ಸಾಗರದಿಂದ ವೇದಾವತಿ ನದಿ ಮೂಲಕ ಶಿಡ್ಲಯ್ಯನಕೋಟೆ ಬ್ಯಾರೇಜಿನ ಭಾಗದ ಗುರುತ್ವಾಕರ್ಷಣಾ ಕಾಲುವೆ ಮುಖಾಂತರ ಕ್ಷೇತ್ರದ ಹಲವು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದಿಂದ ಆದೇಶ ದೊರೆತಿದೆ ಎಂದು ಟಿ.ರಘುಮೂರ್ತಿ ತಿಳಿಸಿದ್ದಾರೆ.

ತಾಲೂಕಿನ ಟಿ.ಎನ್.ಕೋಟೆ, ಚೌಳೂರು, ಗೋಸಿಕೆರೆ, ಪರಶುರಾಂಪುರದ ದೊಡ್ಡಕೆರೆ ಮತ್ತು ಸಣ್ಣಕೆರೆ ಜತೆಗೆ ವೇದಾವತಿ ನದಿ ಎಡಭಾಗದಲ್ಲಿರುವ ರಾಣಿಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಸರ್ಕಾರ ಸಮ್ಮತಿಸಿದೆ ಎಂದಿದ್ದಾರೆ.

ಬರಪೀಡಿತ ತಾಲೂಕಿನ ಬಹುವರ್ಷಗಳ ಬೇಡಿಕೆ ಈಡೇರಿಕೆಗೆ ಅವಕಾಶ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂಸದ ಎ.ನಾರಾಯಣಸ್ವಾಮಿ ಇತರೆ ಹೋರಾಟದ ಸಂಘಟನೆಗಳ ಬೆಂಬಲ ಸ್ಮರಿಸುತ್ತೇನೆ ಎಂದು ಹೇಳಿದ್ದಾರೆ.

ವಿವಿ ಸಾಗರದ ಬಲದಂಡೆ ನಾಲೆಯ ಮೂಲಕ ಸುವರ್ಣಮುಖಿ ನದಿಗೆ 0.1 ಟಿಎಂಸಿ ಅಡಿ ನೀರು ಹರಿಯಲಿದೆ. ಇದೇ ಭಾಗದ ಶಿಡ್ಲಯ್ಯನಕೋಟೆ ಬ್ಯಾರೇಜ್ ಮುಖಾಂತರ 0.03 ಟಿಎಂಸಿ ಅಡಿ ನೀರು ಬುಡುರುಕುಂಟೆ, ಎಳವರಹಟ್ಟಿ, ಸೂಗೂರು ಹಾದಿಯಲ್ಲಿ ಇಲ್ಲಿನ ಸುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರೈತರ ಜಮೀನುಗಳಿಗೂ ನೀರುಣಿಸುವ ಕೆಲಸವಾಗುತ್ತದೆ ಎಂದು ತಿಳಿಸಿದ್ದಾರೆ.