ಚಳ್ಳಕೆರೆ: ಸ್ವಾತಂತ್ರ ಪೂರ್ವದಲ್ಲಿ ನಗರದ ಹೃದಯ ಭಾಗದಲ್ಲಿ ಆರಂಭವಾಗಿದ್ದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ 1.90 ಕೋಟಿ ರೂ. ಅನುದಾನ ಮಂಜೂರಾಗಿದೆ.
ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಈಚೆಗೆ ಸ್ಥಳ ಪರಿಶೀಲನೆ ನಡೆಸಿದರು. 1944ರಲ್ಲಿ ನಿರ್ಮಾಣಗೊಂಡ ಶಾಲೆ ಶಿಥಿಲಾವಸ್ಥೆ ತಲುಪಿತ್ತು. ನಗರದ ಮಧ್ಯೆಯಿರುವ ಶಾಲೆಯನ್ನು ಆಕರ್ಷಣೀಯವಾಗಿ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ.
ಮೊದಲು ಟೌನ್‌ಹಾಲ್ ಆಗಿದ್ದ ಕಟ್ಟಡದಲ್ಲಿ ಮುನ್ಸಿಪಲ್ ಹೈಸ್ಕೂಲ್ ಆರಂಭಿಸಲಾಗಿತ್ತು. 1971ರಲ್ಲಿ ಸರ್ಕಾರಿ ಶಾಲೆಯಾಗಿ ಪರಿವರ್ತನೆ ಮಾಡಲಾಯಿತು.
ತಾಲೂಕು ಕೇಂದ್ರದಲ್ಲಿ ದೊಡ್ಡ ಸರ್ಕಾರಿ ಶಾಲೆಯೆಂದೇ ಹೆಸರು ಪಡೆದಿರುವ ಈ ಶಾಲೆಯಲ್ಲಿ ಪ್ರತಿವರ್ಷ ದಾಖಲಾತಿ ಪ್ರಮಾಣ ಉತ್ತಮವಾಗಿರುತ್ತದೆ. ಸದ್ಯ ತಾಲೂಕಿನ ವಿವಿಧ ಹಳ್ಳಿಗಳಿಂದ 580 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಪ್ರತಿ ವರ್ಷ ಶೇ.80ಕ್ಕಿಂತ ಅಧಿಕ ಫಲಿತಾಂಶ ಪಡೆಯುತ್ತಿದೆ. ಈಗ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿರುವುದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
ಮಾಜಿ ಶಾಸಕ ಬಸವರಾಜ್ ಮಂಡಿಮಠ್ ಇಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮಾಜಿ ಸಚಿವರಾದ ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ, ಡಿ.ಸುಧಾಕರ್, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ಆಂಗ್ಲ ವ್ಯಾಕರಣ ಪಂಡಿತರೆಂದೇ ಹೆಸರಾಗಿರುವ ಕಲಿಕೃಷ್ಣ ಈ ಶಾಲೆ ವಿದ್ಯಾರ್ಥಿಗಳಾಗಿದ್ದರು.