ಚಳ್ಳಕೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಆತಂಕ ತೊರೆದು ಪರೀಕ್ಷೆ ಬರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕಿವಿಮಾತು ಹೇಳಿದ್ದಾರೆ.
ತಾಲೂಕಿನಲ್ಲಿ 4588 ವಿದ್ಯಾರ್ಥಿಗಳಿಗೆ 18 ಕೇಂದ್ರಗಳನ್ನು ತೆರೆಯಲಾಗಿದೆ. ಕರೊನಾ ಪರಿಣಾಮದ ದಿನಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ವಿಶೇಷ ಕಾಳಜಿ ವಹಿಸಲಾಗಿದೆ. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಧರಿಸಿಕೊಂಡು ಪರಸ್ಪರ ಅಂತರ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರದ ಸಮೀಪ ಆರೋಗ್ಯ ಕೇಂದ್ರ ತೆರೆಯಲಾಗುತ್ತದೆ. ಇಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಯ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ನೀಡಲು ವ್ಯವಸ್ಥೆ ಮಾಡಲಾಗುವುದು.
ಎನ್‌ಸಿಸಿ ವಿದ್ಯಾರ್ಥಿಗಳು, ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗುವುದು. ಕೆಲವರು ಸೈಕಲ್‌ನಲ್ಲಿ, ಪಾಲಕರೊಂದಿಗೆ ಕೇಂದ್ರಕ್ಕೆ ಬರುವವರನ್ನು ಹೊರತುಪಡಿಸಿ, ಉಳಿದವರಿಗೆ ವಾಹನ ಸೌಕರ್ಯ ಮಾಡಲಾಗಿದೆ.
ಮೈಕ್ ಬಳಸಿಕೊಂಡು ಕೋವಿಡ್-19 ನಿಯಮಗಳನ್ನು ಜಾಗೃತಿ ಮೂಡಿಸಲಾಗುವುದು. ಪರೀಕ್ಷಾ ಕೇಂದ್ರದಿಂದ 200 ಮೀಟರ್‌ವರೆಗೆ 144 ಸೆಕ್ಷನ್ ಜಾರಿ ಇರಲಿದೆ.
ವಿದ್ಯಾರ್ಥಿಗಳಲ್ಲಿ ಭಯ ಹೋಗಲಾಡಿಸಲು ಪರೀಕ್ಷಾ ಪೂರ್ವವಾಗಿ ಅಣಕು ಪರೀಕ್ಷೆ ನಡೆಸಲಾಗುವುದು. ಆಸಕ್ತರು ಸಮೀಪದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಪರೀಕ್ಷಾ ಕೇಂದ್ರಗಳು: ಪರಶುರಾಂಪುರ ಹೋಬಳಿ ವ್ಯಾಪ್ತಿಯ ಟಿಎನ್ ಕೋಟೆ, ನಾರಾಯಣಪುರ ಮತ್ತು ಪರಶುರಾಮಪುರ, ಕಸಬಾ ವ್ಯಾಪ್ತಿಯಲ್ಲಿ ಆದರ್ಶ ವಿದ್ಯಾಲಯ, ಮೊರಾರ್ಜಿ ದೇಸಾಯಿ, ಬಿಎಂಜಿಎಚ್‌ಎಸ್, ಹೆಗ್ಗೆರೆ ತಾಯಮ್ಮ, ಬಾಪೂಜಿ ಪದವಿಪೂರ್ವ ಕಾಲೇಜು, ಮೀರಸಾಬಿಹಳ್ಳಿ, ಸ್ವಾಮಿ ವಿವೇಕನಂದ, ಕಾಪರಹಳ್ಳಿ ಹಾಗೂ ತಳಕು ಮತ್ತು ನಾಯಕನಹಟ್ಟಿ ಭಾಗದಲ್ಲಿ ಎಸ್‌ಟಿಎಸ್‌ಆರ್ ಶಾಲೆ, ತಳಕು, ರೇಣುಕಾಪುರ, ಚಿತ್ರನಾಯ್ಕನಹಳ್ಳಿ ಹಿರೇಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಅಬ್ಬೇನಹಳ್ಳಿ ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬಿಇಒ ಮಾಹಿತಿ ನೀಡಿದ್ದಾರೆ.