ಜಿಲ್ಲೆ

ಮುಂಗಾರು ಶೇಂಗಾ ಬಿತ್ತನೆಗೆ ಸಕಲ ಸಿದ್ಧ

Chitradurga

ಚಳ್ಳಕೆರೆ: ಮುಂಗಾರು ಶೇಂಗಾ ಬಿತ್ತನೆಗೆ ಕೃಷಿ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್ ಹೇಳಿದರು.

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಸೋಮವಾರ ರೈತ ಸಂಘಟನೆಗಳು, ರೈತರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಿರೀಕ್ಷಿತ ಬಿತ್ತನೆ ಬೀಜ ಪೂರೈಸಲು ಗುಣಮಟ್ಟದ ಶೇಂಗಾ ಸಂಗ್ರಹಿಸಲಾಗಿದೆ. ಕಸಬಾ, ಪರಶುರಾಂಪುರ, ನಾಯಕನಹಟ್ಟಿ, ತಳುಕು ಹೋಬಳಿ ಕೇಂದ್ರಗಳಲ್ಲಿ ಬುಧವಾರದಿಂದ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ರೈತರ ಆಕ್ರೋಶ: ಪಶು ಇಲಾಖೆ, ಗೊಬ್ಬರ, ಬೀಜ ಮಾರಾಟಗಾರ ಅಂಗಡಿ ಮಾಲೀಕರಿಂದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಳಪೆ ಗೊಬ್ಬರ, ಬಿತ್ತನೆ ಬೀಜ ಮಾರಾಟಕ್ಕೆ ಅವಕಾಶವಾಗುತ್ತಿದೆ ಎಂದು ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶೇಂಗಾವನ್ನು ಕೇವಲ 3 ಸಾವಿರಕ್ಕೆ ಖರೀದಿಸಿ, ಈಗ ಬಿತ್ತನೆ ಶೇಂಗಾವನ್ನು 7400 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಎಲ್ಲ ವರ್ಗದ ರೈತರಿಗೆ 4 ಸಾವಿರ ರೂ. ನಂತೆ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ, ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸರ್ಕಾರದ ನಿರ್ದೇಶನದಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘಟನೆಯ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ.ಭೂತಯ್ಯ, ಆರ್.ಎ.ದಯಾನಂದ ಮೂರ್ತಿ, ಶ್ರೀಕಂಠಮೂರ್ತಿ, ರಾಜಪ್ಪ, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ಸಭೆ ಬಹಿಷ್ಕಾರ ರೈತ ಮುಖಂಡ: ರೈತರ ಸಭೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಮಯಕ್ಕೆ ಸರಿಯಾಗಿ ಆಗಮಿಸಿಲ್ಲ ಮತ್ತು ಫರ್ಟಿಲೈಜರ್ಸ್‌ ಮಾಲೀಕರನ್ನು ಕರೆದಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘಟನೆ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಸಭೆ ಬಹಿಷ್ಕರಿಸಿ ಹೊರ ನಡೆದರು.