ಚಳ್ಳಕೆರೆ: ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ವಿಶ್ವಕರ್ಮ ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಕಮಲಮ್ಮ ಹೇಳಿದರು.
ಇಲ್ಲಿನ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಬುಧವಾರ ವಿಶ್ವಕರ್ಮ ಮಹಿಳಾ ಜಾಗೃತಿ ಸಂಘ ಹಮ್ಮಿಕೊಂಡಿದ್ದ ಕಾರ್ಮಿಕ ಇಲಾಖೆಯ ಅಂಬೇಡ್ಕರ್ ಸಹಾಯ ಹಸ್ತ ಸೌಲಭ್ಯದ ಕಾರ್ಡ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಂಘಟಿತ ವಲಯದಲ್ಲಿ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕ ಇಲಾಖೆ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಇದರ ಬಗ್ಗೆ ಜಾಗೃತಿ ಇಲ್ಲದ ಕಾರಣ ಸೌಲಭ್ಯ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದೇವೆ ಎಂದರು.
ಸ್ಥಳೀಯ ಸಂಘ-ಸಂಸ್ಥೆಗಳು ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯದ ಗುರುತಿನ ಚೀಟಿ ಕೊಡಿಸುವ ಮೂಲಕ ಬದುಕಿನ ಭದ್ರತೆಗೆ ದಾರಿ ಮಾಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯೆ ಆರ್.ಮಂಜುಳಾ, ವಿಶ್ವಕರ್ಮ ಮಹಿಳಾ ಜಾಗೃತಿ ಸಂಘದ ಎಂ.ಸರಸ್ವತಮ್ಮ, ರಾಜೇಶ್ವರಿ, ಕಾಮಾಕ್ಷಮ್ಮ, ಚಂದ್ರಮ್ಮ, ಸುಮಾ, ಸುಜಾತಾ, ಉಮಾದೇವಿ, ಸುಮಲತಾ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ವೆಂಕಟೇಶಚಾರ್, ಕಾರ್ಯದರ್ಶಿ ಸಿ.ಇ.ಪ್ರಸನ್ನ, ಆರ್.ಪ್ರಸನ್ನಕುಮಾರ್, ಸಿ.ಮಂಜುನಾಥ, ಆರ್.ಶ್ರೀನಿವಾಸಚಾರ್ ಮತ್ತಿತರರು ಇದ್ದರು.