ಚಳ್ಳಕೆರೆ: ಬಿತ್ತನೆ ಪೂರ್ವದಲ್ಲಿ ಕೃಷಿ ಇಲಾಖೆ ನಿರ್ದೇಶನದಂತೆ ಬೀಜೋಪಚಾರ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡಬೇಕು ಎಂದು ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ನಾಗಭೂಷಣ ಹೇಳಿದರು.
ಇಲ್ಲಿನ ಸೋಮಗುದ್ದು ರಸ್ತೆಯಲ್ಲಿನ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶೇಂಗಾ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಪ್ರತಿ ರೈತರಿಗೂ ಶೇಂಗಾ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಗೊಂದಲ ಮಾಡಿಕೊಳ್ಳದೆ ನಿಗದಿತ ದಾಖಲೆ ಸಲ್ಲಿಸಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, 2020-21ನೇ ಸಾಲಿನ ಮುಂಗಾರು ಬಿತ್ತನೆ ವ್ಯವಸ್ಥೆಗೆ 12 ಸಾವಿರ ಕ್ವಿಂಟಾಲ್ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಸಬಾ, ಪರಶುರಾಂಪುರ, ತಳಕು, ನಾಯಕನಹಟ್ಟಿ ಹೋಬಳಿ ಕೇಂದ್ರಗಳಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ರೈತರ ಅನುಕೂಲಕ್ಕಾಗಿ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಇಲಾಖೆ ಹೆಚ್ಚಿನ ನಿಗಾ ವಹಿಸಲಾಗಿದೆ. ಆರಂಭದಲ್ಲೆ ಶೇಂಗಾವನ್ನು ಪರೀಶಿಲನೆ ಮತ್ತು ಗುಣಮಟ್ಟ ತಿಳಿದುಕೊಂಡು ದಾಸ್ತಾನು ಮಾಡಿಕೊಳ್ಳಲಾಗಿದೆ. ಪ್ರತಿ ಹೋಬಳಿ ಹಂತದಲ್ಲಿ 3 ಸಾವಿರ ಕ್ವಿಂಟಾಲ್ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ತಾಪಂ ಸಾಮಾಜಿಕ ಸಮಿತಿ ಅಧ್ಯಕ್ಷ ಎಚ್.ಅಂಜನೇಯ ಸದಸ್ಯರಾದ ಎಚ್.ಸಮರ್ಥರಾಯ, ರಂಜಿತಾ ಇದ್ದರು.