ಜಿಲ್ಲೆ

ಗಡಿ ಭಾಗದ ಮಕ್ಕಳಲ್ಲಿ ಛಲ ಹೆಚ್ಚು, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯ, ಯುವ ಬ್ರಿಗೇಡ್ ಅಭಿವೃದ್ಧಿಪಡಿಸಿದ ಶಾಲೆ ಉದ್ಘಾಟನೆ

Bengaluru Rural

ಆನೇಕಲ್: ಗಡಿ ಭಾಗದ ಮಕ್ಕಳಲ್ಲಿ ಸಾಧಿಸುವ ಛಲ ಹೆಚ್ಚಾಗಿರುತ್ತದೆ. ರಾಜ್ಯ ಮತ್ತು ತಮಿಳುನಾಡು ಗಡಿ ಭಾಗದಲ್ಲಿನ ಇಂಥ ಶಾಲೆಗಳಲ್ಲಿ ಓದುವ ಮಕ್ಕಳೇ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

ಸೋಲೂರು ಗ್ರಾಮದಲ್ಲಿ ಶಕ್ತಿ ಕೇಂದ್ರ ಟ್ರಸ್ಟ್, ಯುವಾ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಸಹಯೋಗದಲ್ಲಿ ವಿನೋಬಾ ಭಾವೆ ವಿದ್ಯಾ ಸಂಸ್ಥೆಯ ನೂತನ ಶಾಲಾ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿರುವ ಯುವಾ ಬ್ರಿಗೇಡ್ ಕಾರ್ಯ ಶ್ಲಾಘನೀಯ. ಖಾಸಗಿ ಶಾಲೆಗಳ ಮಾದರಿಯಲ್ಲಿ ಈ ಶಾಲೆಯನ್ನು ನಿರ್ಮಿಸಲಾಗಿದೆ. ತರಗತಿಗಳು ಸೇರಿ ಸುಸಜ್ಜಿತವಾದ ಶೌಚಗೃಹ ಇಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ್ಯವಿವಾಹ ತಡೆಗಟ್ಟಲು ಶಾಲೆ ಪುನರಾರಂಭ: ಕರೊನಾ ಪಿಡುಗಿನಿಂದಾಗಿ ಕೆಲವು ದಿನಗಳು ನಮಗೂ ಹಾಗೂ ಶಾಲಾ ಮಕ್ಕಳಿಗೆ ಸಂಕಷ್ಟದ ದಿನಗಳಾಗಿದ್ದವು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕಿದರು. ರಾಜ್ಯದಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಯಿತು. ಕೆಲವು ತಾಲೂಕುಗಳಲ್ಲಿ ಬಾಲ್ಯವಿವಾಹದ ಪಿಡುಗು ಹೆಚ್ಚಾಯಿತು. ಇಂಥ ಸಾಮಾಜಿಕ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಭೀತಿ ಇತ್ತು. ಆದ್ದರಿಂದ, ಸಾಕಷ್ಟು ಸಮಾಲೋಚನೆಯ ಬಳಿಕ ಆರೋಗ್ಯ ಇಲಾಖೆಯ ತಾಂತ್ರಿಕ ಇಲಾಖೆ ಜತೆ ಚರ್ಚಿಸಿ 10ನೇ ತರಗತಿ ಹಾಗೂ ಪಿಯುಸಿ ತರಗತಿಗಳನ್ನು ಪುನರಾರಂಭಿಸಲು ನಿರ್ಧರಿಸಲಾಯಿತು ಎಂದು ಸುರೇಶ್‌ಕುಮಾರ್ ತಿಳಿಸಿದರು.

6 ಸಾವಿರ ಶಾಲೆಗಳಲ್ಲಿ ಸೌಕರ್ಯ ಕೊರತೆ: ರಾಜ್ಯದ 6 ಸಾವಿರ ಶಾಲೆಗಳಲ್ಲಿ ಕುಡಿವನೀರು ಹಾಗೂ ಶೌಚಗೃಹದ ಸಮಸ್ಯೆ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಕುಡಿಯುವ ನೀರಿನ ಬವಣೆ ನೀಗಿಸಲು ಪರಿಹಾರ ಎಂಬ ಕಾರ್ಯಕ್ರಮ ರೂಪಿಸಿದೆ, ಶೌಚಗೃಹಗಳನ್ನು ನಿರ್ಮಿಸಬೇಕಿದೆ. ಜತೆಗೆ ಸ್ವಚ್ಛತೆಯನ್ನೂ ಕಾಯ್ದುಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು.

ಮಕ್ಕಳ ಸಂಖ್ಯೆ ಹೆಚ್ಚಿಸಿ: ಈ ಭಾಗಕ್ಕೆ ಇಂಥ ಸುಸಜ್ಜಿತವಾದ ಶಾಲೆಯ ಕಟ್ಟಡದ ಅವಶ್ಯಕತೆ ಇತ್ತು. ಇದನ್ನು ಚಕ್ರವರ್ತಿ ಸೂಲಿಬೆಲೆ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈಗ ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾದರೆ, ಅವರ ಶ್ರಮ ಸಾರ್ಥಕವಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಮಾತನಾಡಿ, ಸಮಾಜದಲ್ಲಿ ಒಂದಷ್ಟು ಬದಲಾವಣೆ ತರಬೇಕು ಎಂಬ ಮನೋಭಾವ ಎಲ್ಲರಲ್ಲೂ ಬರಬೇಕು. ಇಂತಹ ಮನಸ್ಥಿತಿ ಹೊಂದಿರುವವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಬರಬೇಕು. ಆಗ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.

ನಮ್ಮ ರಾಜ್ಯದ ಗಡಿ ಭಾಗದ 32 ತಾಲೂಕುಗಳಲ್ಲಿ ಅನೇಕ ಸಮಸ್ಯೆ ಹಾಗೂ ಸವಾಲುಗಳಿವೆ. ಸದ್ವಿಚಾರಗಳನ್ನು ಸಮಾಜದ ಮುಂದೆ ತರುವ ಅವಶ್ಯಕತೆ ಇದೆ. ಗಡಿನಾಡು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಡಿನಾಡು ಪ್ರಾಧಿಕಾರಗಳು ಆದ್ಯತೆ ಮೇರೆಗೆ ಮುಂದಾಗಬೇಕು ಎಂದು ಹೇಳಿದರು.

ಶಾಲೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಯುವಾ ಬ್ರಿಗೇಡ್, ನಿವೇದಿತ ಪ್ರತಿಷ್ಠಾನ ಹಾಗೂ ಶಕ್ತಿ ಕೇಂದ್ರದ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಶಾಲಾ ಕಟ್ಟಡವನ್ನು ಮರುನಿರ್ಮಾಣ ಮಾಡಲಾಗಿದೆ. ಅಂದಾಜು 35 ಲಕ್ಷ ರೂ. ವೆಚ್ಚವಾಗಿದೆ. ಟಿಂಕೆನ್ ಕಂಪನಿ ಹಾಗೂ ಜಿಎಸ್‌ಬಿ ಸಮಾಜ ಹಾಗೂ ವಿದೇಶದ ಹಲವು ಸ್ನೇಹಿತರು, ೇಸ್‌ಬುಕ್ ಗೆಳೆಯರು ಆರ್ಥಿಕ ಸಹಾಯ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ, ಯುವಾ ಬ್ರಿಗೇಡ್ ಮುಖಂಡ

ಹಿರಿಯ ಹೋರಾಟಗಾರ ಸಿ.ತೋಪಯ್ಯ, ಯುವಾ ಬ್ರಿಗೇಡ್‌ನ ದಕ್ಷಿಣ ರಾಜ್ಯ ಸಂಚಾಲಕ ಚಂದ್ರಶೇಖರ್, ಕರ್ನಾಟಕ ಉತ್ತರ ರಾಜ್ಯ ಸಂಚಾಲಕ ಕಿರಣ್ ಪಾಟೀಲ್, ಬಿಜೆಪಿ ತಾಲೂಕು ಅಧ್ಯಕ್ಷ ಎನ್. ಶಂಕರ್, ಕಟ್ಟಡ ನಿರ್ಮಾತೃ ಶರತ್ ಮತ್ತಿತರರು ಇದ್ದರು.