ಕುಶಾಲನಗರ:
ವಿದ್ಯಾರ್ಥಿಗಳು ಹಾಗೂ ಯುವ ಸಮೂಹವನ್ನು ಸಾಹಿತ್ಯ ಕ್ಷೇತ್ರದತ್ತ ಆಕರ್ಷಿಸುವಂಥ ಸಾಹಿತ್ಯಪರ ಚಟುವಟಿಕೆಗಳು ಹೆಚ್ಚಾಗಿ ಎಲ್ಲೆಡೆ ನಡೆಯಬೇಕು ಎಂದು ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಹೇಳಿದರು. ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ "ಚಕೋರ" ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಆಶಯಗಳನ್ನು ಸಾಹಿತ್ಯದ ಮೂಲಕ ಸಾಕಾರಗೊಳಿಸಬೇಕಿದೆ. ಇದನ್ನೇ ಪಂಪ ಮಾನವ ಕುಲಂ ತಾನೊಂದೇ ವಲಂ ಎಂದಿದ್ದಾರೆ. ಬಸವಣ್ಣನವರು ಕೂಡ ಮಾನವ ಸಮಾಜ ಕಟ್ಟುವುದಕ್ಕೆ ಶ್ರಮಿಸಿದ್ದಾರೆ. ಇಂತಹ ಎಲ್ಲಾ ಸಾಹಿತ್ಯವನ್ನು ನಮ್ಮ ಯುವಜನಾಂಗಕ್ಕೆ ಒತ್ತಿ ಹೇಳುವ ಮೂಲಕ ಜಾತ್ಯತೀತ ಹಾಗೂ ಮನುಷ್ಯಪರವಾದ ಪ್ರೀತಿಯ ಸಮಾಜವನ್ನು ಕಟ್ಟುವ ಕೆಲಸ ಅತೀ ತುರ್ತಾಗಿ ಆಗಬೇಕಿದೆ ಎಂದು ಹೇಳಿದರು.
ಸಾಮಾಜಿಕ ಚಿಂತಕ ವಿ.ಪಿ. ಶಶಿಧರ್ ಮಾತನಾಡಿ, ನೈತಿಕವಾಗಿ ಗಟ್ಟಿಯಾಗಬೇಕಾದರೆ ಆಳವಾಗಿ ಓದಿಕೊಳ್ಳಬೇಕಾಗಿದೆ. ಮೊದಲು ಮಾನವನಾಗು ಎನ್ನುವ ಬಹು ದೊಡ್ಡ ವಿಶ್ವಚಿಂತನೆಯನ್ನು ಕೊಟ್ಟಿದ್ದೇ ಕನ್ನಡ ಸಾಹಿತ್ಯ. ಇಂತಹ ಸಾಹಿತ್ಯಿಕ ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ನಮ್ಮನ್ನು ಉದ್ದೀಪನಗೊಳಿಸುವ ಹೊಸ ಸಾಹಿತ್ಯದ ಮಾರ್ಗದತ್ತ ಯುವಜನಾಂಗ ಆಕರ್ಷಿತರಾಗಬೇಕಿದೆ ಎಂದರು.
ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಡಾ. ಜೆ. ಸೋಮಣ್ಣ ಮಾತನಾಡಿ, ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಆಧುನಿಕ ಜನಾಂಗ ಕೇವಲ ಕ್ಷಣಿಕ ವಿಷಯಗಳಿಗಷ್ಟೇ ಸ್ಪಂದಿಸುತ್ತಿದ್ದಾರೆ. ಆದರೆ ಮನುಷ್ಯ ಪರವಾದ ಆಲೋಚನೆಗಳ ಹೊಸ ಸಮಾಜ ಕಟ್ಟುವ ಕಡೆಗೆ ಯುವಜನಾಂಗ ಹಾಗೂ ವಿದ್ಯಾರ್ಥಿ ಸಮೂಹ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಚಕೋರ ಕೊಡಗು ಇಡೀ ಜಿಲ್ಲೆಯಾದ್ಯಂತ ಯುವ ಜನರಲ್ಲಿ ಸಾಹಿತ್ಯ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಚಿಕ್ಕಮಗಳೂರು ಡಾ. ಗಣೇಶ್, ಯುವಜನತೆಯನ್ನು ದೃಷ್ಟಿಯಲ್ಲಿರಿಸಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮವಿದು. ಸಾಹಿತ್ಯಪರ ಚಿಂತನೆ ಹಾಗೂ ಚಟುವಟಿಕೆಗಳಿಗೆ, ಗ್ರಾಮೀಣ ಭಾಗದ ಯುವ ಬರಹಗಾರರಿಗೆ, ಸಾಹಿತಿಗಳಿಗೆ, ಚಿಂತಕರಲ್ಲಿ ಜಾಗತಿಕ ಚಿಂತನೆಗಳ ಜಾಗೃತಿ ಮೂಡಿಸುವುದು 'ಚಕೋರ' ದ ಉದ್ದೇಶವಾಗಿದೆ. ಕರ್ನಾಟಕ ಕಟ್ಟಿದ ನೂರು ಬರಹಗಾರರ, ನಾಡಿನ 50 ಮಂದಿ ಮಹಿಳೆಯರನ್ನೂ ಒಳಗೊಂಡ ಚಿಂತನೆಗಳ ಹೊತ್ತಿಗೆ ಕೂಡ ಹೊರತರಲಾಗುತ್ತಿದೆ. ಸರ್ವ ಜನಾಂಗದ ಹಿತರಕ್ಷಣೆಗಾಗಿ ನಾಡಿನ ಜನರ ಸಂಕಟ - ಸಂತಸಗಳನ್ನು ಗಮನದಲ್ಲಿಟ್ಟು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಾಹಿತ್ಯ ಹೊರಹೊಮ್ಮಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಚಕೋರ ಸಾಹಿತ್ಯ ವೇದಿಕೆ ಸಂಚಾಲಕಿ ರಮ್ಯಾ ಮೂರ್ನಾಡು, ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ, ರಂಗಭೂಮಿ ಕಲಾವಿದ. ಭರಮಣ್ಣ ಬೆಟಗೇರಿ, ಸಾಹಿತ್ಯ ಚಿಂತಕರಾದ ಕೆ.ಎಸ್.ಮೂರ್ತಿ, ಮೆ.ನಾ.ವೆಂಕಟನಾಯಕ್, ಉಮೇಶ್ ಭಟ್, ಮಾಲಾಮೂರ್ತಿ, ಉಪನ್ಯಾಸಕಿ ಆಶಿತಾ, ಅನಿತಾ, ಸಿಂಚನಾ ಇದ್ದರು.