ಜಿಲ್ಲೆ

ಔಷಧವಿಲ್ಲ ಎಂದು ನೆಪ ಹೇಳಿದರೆ ಕ್ರಮ

ಜಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯಾದರೂ ರೋಗಿಗಳಿಗೆ ವಿತರಿಸುತ್ತಿಲ್ಲ ಎಂಬ ದೂರುಗಳಿವೆ. ಇನ್ನುಮುಂದೆ ಆಸ್ಪತ್ರೆಯಲ್ಲಿ ಔಷಧವಿಲ್ಲ ಎಂಬ ಮಾತು ಕೇಳ ಕೂಡದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಎಚ್ಚರಿಸಿದರು.

ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಅಧ್ಯಕ್ಷರು ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಮೊದಲು ಔಷಧ ವಿತರಣಾ ಕೇಂದ್ರಕ್ಕೆ ತೆರಳಿ ಪೂರೈಕೆ- ವಿತರಣೆ ಕುರಿತು ಮಾಹಿತಿ ಪಡೆದರು.

ಔಷಧವಿದ್ದರೆ ಹೊರಗೆ ಚೀಟಿ ಬರೆಯಬಾರದು. ಔಷಧ ಮುಗಿವ ಮುನ್ನ ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೇ ತರಿಸಿಕೊಳ್ಳಬೇಕು. ಖಾಲಿಯಾಗಿ ವಾರ ಕಳೆದರೂ ಸುಮ್ಮನಿದ್ದರೆ ನಿರ್ಲಕ್ಷ ಎಂದು ಪರಿಗಣಿಸಲಾಗುವುದು ಎಂದರು.

ವಾರ್ಡ್​ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ಆಪರೇಷನ್ ಥಿಯೇಟರ್, ಹೆರಿಗೆ ವಾರ್ಡ್, ಇಂಜಕ್ಷನ್ ಕೊಠಡಿ ಪರಿಶೀಲಿಸಿದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಓವರ್​ಹೆಡ್ ಟ್ಯಾಂಕ್ ಪರಿಶೀಲಿಸಿ ನಿರ್ವಣದ ಅವಧಿ, ಎಷ್ಟು ದಿನಕ್ಕೊಮ್ಮೆ ಶುಚಿ ಮಾಡಲಾಗುತ್ತಿದೆ. ನೀರಿನ ಮೂಲ ಕುರಿತು ಮಾಹಿತಿ ಪಡೆದರು. ರೋಗಿಗಳಿಗೆ ಗುಣಮಟ್ಟದ ಆಹಾರ, ಕುಡಿಯುವ ನೀರು ಒದಗಿಸಬೇಕು ಎಂದು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಜಾನಾಯ್ಕ, ಡಿಎಚ್​ಒ ಡಾ. ಷಣ್ಮುಖಪ್ಪ, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಷಣ್ಮುಖ, ಟಿಎಚ್​ಒ ವಿಶ್ವನಾಥ್ ಇತರರಿದ್ದರು.

ಸಾರ್ವಜನಿಕರ ದೂರುಗಳು: 1. ಫಿಜಿಷಿಯನ್, ಚರ್ಮರೋಗ ತಜ್ಞ, ಹೆಚ್ಚುವರಿ ಸ್ತ್ರೀ ರೋಗ ತಜ್ಞರ ಕೊರತೆ. 2. ನಗು ಮಗು ವಾಹನ ನಿರಂತರ ಓಡಾಡಬೇಕು. 3. ಸ್ಕ್ಯಾನಿಂಗ್ ಆಪರೇಟರ್ ನೇಮಿಸಿ ಖಾಸಗಿ ಲ್ಯಾಬ್​ಗಳ ಹಾವಳಿ ತಪ್ಪಿಸಬೇಕು. 4. ಶುದ್ಧ ಕುಡಿವ ನೀರಿಗೆ ಪ್ರತ್ಯೇಕ ಆರ್​ಒ ಘಟಕ ಸ್ಥಾಪಿಸಬೇಕು. 5. ಬೀಗ ಹಾಕಿರುವ ಪ್ರಯೋಗಾಲಯ ಉಪಯೋಗಿಸಬೇಕು. 6. ಜನ ಔಷಧ ಕೇಂದ್ರಗಳಿಗೆ ಔಷಧ ಪೂರೈಕೆ ಇಲ್ಲ.

ಸೇವೆ ಮಾಡುವ ವೈದ್ಯರಿಗೆ ಅವಕಾಶ: ರಾಜ್ಯದಲ್ಲಿ ವೈದ್ಯರ ಕೊರತೆ ಇದೆ, ಹಾಗಂತ ಸರ್ಕಾರ ಸುಮ್ಮನೆ ಕೂತಿಲ್ಲ. ಕಾಯಂ ಸೇವೆ ಮಾಡುವ ಮನೋಭಾವದವರು ಬಂದರೆ ನೇಮಿಸಿಕೊಳ್ಳಬಹುದು. ಇಲ್ಲವೇ ಗುತ್ತಿಗೆ ಆಧಾರದ ಮೇರೆಗೆ ಬಂದರೆ ಅವಕಾಶಕೊಡಿ. ಒಂದು ಕೇಸಿಗೆ ಇಂತಿಷ್ಟು ಹಣ ಕೊಟ್ಟಾದರೂ ವೈದ್ಯರನ್ನು ಕರೆಯಿಸಿ ಎಂದು ಸೂಚನೆ ನೀಡಿದೆ. ಜಗಳೂರಿಗೆ ವೈದ್ಯರು, ಸಿಬ್ಬಂದಿ ನೀಡಲು ಜಿಲ್ಲಾಧಿಕಾರಿ, ಡಿಎಚ್​ಒ ಅವರ ಜತೆ ಮಾತನಾಡುತ್ತೇನೆ ಎಂದು ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.