ಜಿಲ್ಲೆ

ಭಕ್ತರೊಂದಿಗೆ ಪ್ರಸಾದ ಸ್ವೀಕರಿಸಿದ ಪ್ರಾಧಿಕಾರದ ಅಧ್ಯಕ್ಷೆ

ಹನೂರು: ತಾಲೂಕಿನ ಮಲೆಮಹದೇಶ್ವರಬೆಟ್ಟದ ಪರ ಮಾಡುವ ಸ್ಥಳದಲ್ಲಿ (ಅಡುಗೆ ತಯಾರಿಸುವ) ಮಂಗಳವಾರ ಸಂಜೆ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಸಾಮಾನ್ಯರಂತೆ ಭಕ್ತರ ಜತೆಯಲ್ಲೇ ಕುಳಿತು ಪ್ರಸಾದ ಸ್ವೀಕರಿಸಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.


ಸರಸ್ವತಿ ಅವರು ಸಂಜೆ 5 ಗಂಟೆಯಲ್ಲಿ ಪರ ಮಾಡುವ ಸ್ಥಳಕ್ಕೆ ಪರಿಶೀಲನೆಗಾಗಿ ತೆರಳಿದ್ದರು. ಈ ವೇಳೆ ಗುಂಡ್ಲುಪೇಟೆ ತಾಲೂಕು ಕೋಡಹಳ್ಳಿ ಗ್ರಾಮಸ್ಥರು ಅಡುಗೆ ತಯಾರಿಸುತ್ತಿದ್ದು, ನಮ್ಮ ಜತೆ ಊಟ ಮಾಡಬೇಕು ಎಂದು ಸರಸ್ವತಿ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಆದರೆ, ಕಾರ್ಯದರ್ಶಿ ಅವರು ಮೊದಲು ಪೂಜೆ ನೆರವೇರಿಸಿ ಎಲ್ಲರೂ ಊಟ ಮಾಡಿ ಎಂದು ತಿಳಿಸಿದರು. ಈ ವೇಳೆ ಶಿವಪುರ ಗ್ರಾಪಂ ಮಾಜಿ ಅಧ್ಯಕ್ಷೆ ಶಿವಮ್ಮ ಎಂಬುವರು ನೀವು ಮ.ಬೆಟ್ಟಕ್ಕೆ ಹಿರಿಯ ಅಧಿಕಾರಿ. ಹಾಗಾಗಿ ನೀವು ಬಡವರ ಜತೆ ಊಟ ಮಾಡುವುದಿಲ್ಲ ಬಿಡಿ ಎಂದರು. ಇದಕ್ಕೆ ಸರಸ್ವತಿ ಪ್ರತಿಕ್ರಿಯಿಸಿ, ನಮಗೆ ಬಡವರು, ಶ್ರೀಮಂತರು ಎಂಬ ಬೇಧ ಭಾವವಿಲ್ಲ. ನೀವು ಪೂಜೆ ನೆರವೇರಿಸಿದ ಬಳಿಕ ಬಂದು ಪ್ರಸಾದ ಸ್ವೀಕರಿಸುತ್ತೇನೆ ಎಂದು ಹೇಳಿ ತೆರಳಿದ್ದರು.


ಕೆಲ ಹೊತ್ತಿನ ಬಳಿಕ ಸರಸ್ವತಿ ಆಗಮಿಸಿ ಭಕ್ತರ ಜತೆಯಲ್ಲಿಯೇ ಕುಳಿತುಊಟ ಮಾಡಿದರು. ಈ ವೇಳೆ ಭಕ್ತರೊಂದಿಗೆ ಕೆಲಕಾಲ ಕಳೆದಿದ್ದು ಭಕ್ತರ ಮೆಚ್ಚುಗೆಗೆ ಕಾರಣವಾಯಿತು.