ಜಿಲ್ಲೆ

ವಸತಿ ರಹಿತ ಅಲೆಮಾರಿಗಳಿಗೆ ಹೊಸ ನಗರ ನಿರ್ಮಾಣಕ್ಕೆ ಕ್ರಮ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಲ್ಲಿ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳನ್ನು ಜಾತಿವಾರು ಗುರುತಿಸಬೇಕು. ಸರ್ಕಾರಿ ಜಾಗ ಇಲ್ಲದಿದ್ದರೆ ಖಾಸಗಿ ಜಮೀನನ್ನು ಖರೀದಿಸಲು ಅನುದಾನ ನೀಡಲಾಗುವುದು. ಅಲೆಮಾರಿ ಸಮುದಾಯದವರಿಗೆ ಹೊಸ ನಗರ ಮಾಡಿಕೊಡಲು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಜಂಟಿಯಾಗಿ 15 ದಿನಗಳೊಳಗೆ ಕ್ರಮ ವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ದೂರದೃಷ್ಟಿಯಿಂದ ಅಲೆಮಾರಿ ನಿಗಮ ಸ್ಥಾಪಿಸಿದೆ. ಅಲೆಮಾರಿ ಸಮುದಾಯದವರಿಗೆ ನೇರ ಸಾಲ, ಸ್ವಯಂ ಉದ್ಯೋಗ, ಸ್ವಾವಲಂಬಿ ಸಾರಥಿ, ಮೈಕ್ರೋ ಕ್ರೆಡಿಟ್, ಗಂಗಾ ಕಲ್ಯಾಣ ಹಾಗೂ ವಿಷೇಶವಾಗಿ ಮಹಿಳೆಯರಿಗಾಗಿ ಭೂಒಡೆತನ ಯೋಜನೆಯನ್ನು ಜಾರಿಗೆ ತರಲಾಗುವುದು. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಽಕಾರಿ ಅಧ್ಯಕ್ಷರಾಗಿದ್ದು, ಅಲೆಮಾರಿ ಸಮುದಾಯದ ಮಹಿಳೆ ಒಳಗೊಂಡು ಐವರ ಜಿಲ್ಲಾ ಸಮಿತಿ ರಚಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಸಭೆಯ ನಂತರ ಅಧ್ಯಕ್ಷೆ ಪಲ್ಲವಿ ಅವರು ತಾಲೂಕಿನ ಸಿದ್ಧೇಶ್ವರನಗರಕ್ಕೆ ಭೇಟಿ ನೀಡಿ ಅಲ್ಲಿನ ವಾಸಿಸುವ ಅಲೆಮಾರಿ ಸಮುದಾಯದರ ಸಮಸ್ಯೆಗಳನ್ನು ಆಲಿಸಿದರು. ಅಲೆಮಾರಿ ಸಮುದಾಯದ ವಸತಿ ರಹಿತ ಕುಟುಂಬದವರಿಗೆ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಜಮೀನನ್ನು ಕಾಯ್ದ್ದಿರಿಸಿ ಗುಡಿಸಲು ಮುಕ್ತರನ್ನಾಗಿಸಲು ವಸತಿ ಕಲ್ಪಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ, ವಿವಿಧ ಇಲಾಖೆ ಅಽಕಾರಿಗಳಿದ್ದರು.