ಜಿಲ್ಲೆ

ಅಲ್ಪಸಂಖ್ಯಾತರಿಗೆ 5 ಸಾವಿರ ಕೋಟಿ ರೂ. ನೀಡಲು ಶಿಫಾರಸ್ಸು

ಗೋಪಾಲಕೃಷ್ಣ ಪಾದೂರ್

ಉಡುಪಿ: ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಳೆದ ಬಾರಿ 2100 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಈ ಬಾರಿ 5 ಸಾವಿರಕ್ಕೆ ಏರಿಕೆ ಮಾಡುವಂತೆ ಮುಂದಿನ ತಿಂಗಳು ಆಯೋಗದಿಂದ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್​ ಅಜೀಮ್​ ಹೇಳಿದರು.

ಜಿಪಂ ಸಭಾಂಗಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಕುಂದುಕೊರತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳಿವೆ. ಆದರೆ ಆನುದಾನ ಸಾಲುತ್ತಿಲ್ಲ. ಅತೀ ಕಡಿಮೆ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನ ನೀಡಿದರೆ ಸಮುದಾಯಕ್ಕೆ ಸಮಾಧಾನವಾಗಲಿದೆ. ಅರಿವು ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ 20 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಇದರೊಂದಿಗೆ ಪ್ಯಾರಾ ಮೆಡಿಕಲ್​, ನರ್ಸಿಂಗ್​, ಹೋಟೆಲ್​ ಮ್ಯಾನೇಜ್ಮೆಂಟ್​ ಕೋರ್ಸ್​ಗಳಿಗೂ ಕನಿಷ್ಠ 1 ಲಕ್ಷ ರೂ. ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಶಾದಿಭಾಗ್ಯ ಮರುಜಾರಿ ಅಗತ್ಯ
ರಾಜ್ಯ ಸರ್ಕಾರ ಕಳೆದ 4 ವರ್ಷಗಳಿಂದ ಶಾದಿ ಭಾಗ್ಯ ಯೋಜನೆ ಸ್ಥಗಿತಗೊಳಿಸಿದೆ. ಹಿಂದುಗಳಿಗೆ ಸಪ್ತಪದಿ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ನು ಅಲ್ಪಸಂಖ್ಯಾತ ಸಮುದಾಯಕ್ಕೂ ವಿಸ್ತರಿಸಬೇಕು ಎಂದು ಹೇಳಿದರು.

ಖಬರ್​ಸ್ಥಾನ 10 ಅರ್ಜಿ ಬಾಕಿ
ಜಿಲ್ಲೆಯಲ್ಲಿ ಖಬರ್​ ಸ್ಥಾನ ಮಂಜೂರಾತಿ ಬಗ್ಗೆ 10 ಅರ್ಜಿಗಳು ಬಾಕಿ ಇದ್ದು, ಬೇಡಿಕೆ ಇರುವ ಕಡೆಗಳಲ್ಲಿ ಸರ್ಕಾರಿ ಜಾಗ ಇಲ್ಲದಿದ್ದರೆ ಹೈಕೋರ್ಟ್​ ಅದೇಶ ಪ್ರಕಾರ ತಹಶೀಲ್ದಾರ್​ ಜಾಗ ಖರೀದಿ ಮಾಡಿ ನೀಡಬೇಕು. ಇದಕ್ಕೂ ಹೆಚ್ಚಿನ ಸ್ಪಂದನೆ ಲಭಿಸುತ್ತಿಲ್ಲ. ಹೀಗಾಗಿ 3&4 ಹಳ್ಳಿಗಳ ಮಧ್ಯೆ ಯಾವುದಾದರೂ ಒಂದು ಸರ್ಕಾರಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಜಾಗ ಮಂಜೂರು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಎಲ್ಲಾ ಅರ್ಹರಿಗೆ ಲಭಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಅರ್ಜಿ ಸಲ್ಲಿಕೆ ವಿಧಾನವನ್ನು ಸರಳೀಕರಣ ಗೊಳಿಸುವುದು ಮತ್ತು ಚೀಟಿ ಎತ್ತುವ ಮೂಲಕ ಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಎಸ್ಸಿ ಮತ್ತು ಎಸ್ಟಿ ಮಾದರಿಯಲ್ಲಿ 6 ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಲು ಮುಖಂಡರು ಆಗ್ರಹಿಸಿದ್ದಾರೆ. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸಂಸದರೆ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರಿಗಾಗಿ ಇರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಬೇಕು. ಜಿಲ್ಲೆಯಲ್ಲಿ ಈವರೆಗೆ ಸದಸ್ಯರ ನೇಮಕಾತಿ ನಡೆದಿಲ್ಲ. ಈ ಬಗ್ಗೆ ತಕ್ಷಣ ಕ್ರಮಕೈಗೊಂಡು ಹೆಸರು ಶಿಾರಸ್ಸು ಮಾಡಿ ಅಯೋಗಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಅಯೋಗದ ಸದಸ್ಯ ಮುಜೀಬುಲ್ಲಾ ಜಾರಿ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಪೂರ್ಣಿಮಾ ಚೂರಿ, ವಕ್ಫ ಅಧಿಕಾರಿ ಅಮ್ಜದ್​, ಮುಖಂಡರಾದ ಅಬ್ದುಲ್​, ಯಹ್ಯಾ ನಕ್ವಾ ಉಪಸ್ಥಿತರಿದ್ದರು.