ಸಾಂದರ್ಭಿಕ ಚಿತ್ರ  
ಜಿಲ್ಲೆ

ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಸರ ಕಳವು ಆರೋಪಿ

ಮಂಗಳೂರು: ಸರ ಕಳವು ಆರೋಪಿಯೋರ್ವ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪಾಂಡೇಶ್ವರ ಪೊಲೀಸರು ಆತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ನಗರದ ಸೂಟರ್ ಪೇಟೆ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಳವುಗೈದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಒಬ್ಬಾತ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದ ಗೋರಖ್ ಪುರ್ ನಿವಾಸಿಗಳಾದ ರವಿ ಬರ್ವ, ಮಹಮ್ಮದ್ ಸಾಹಿಲ್ ಬಂಧಿತ ಆರೋಪಿಗಳು. ಬಾಗಲಕೋಟೆ ನಿವಾಸಿ ಆಲ್ತ್ಾ ಹುಸೇನ್ ಪರಾರಿಯಾದಾತ.
ಜೂ.14ರಂದು ಪ್ರಭಾವತಿ ಎಂಬವರು ಸಂಕ್ರಮಣ ಪೂಜೆ ನಿಮಿತ್ತ ಸೂಟರ್ ಪೇಟೆಗೆ ಹೋಗಲು ಎಕ್ಕೂರು ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುವಾಗ ಘಟನೆ ನಡೆದಿದೆ. ಆರೋಪಿಗಳು ಪ್ರಭಾವತಿ ಅವರ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಸರವನ್ನು ಕೈ ಹಾಕಿ ಎಳೆದು ಪರಾರಿಯಾಗಿದ್ದರು. ಪಾಂಡೇಶ್ವರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಶುಕ್ರವಾರ ಬೆಳಗ್ಗೆ ಆರೋಪಿಗಳು ನಗರದ ಬಸ್ ನಿಲ್ದಾಣದಲ್ಲಿರುವ ಬಗ್ಗೆ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆ ತರುವ ವೇಳೆ ಆರೋಪಿ ಅಲ್ತ್ಾ ಹುಸೇನ್ ಏಕಾಏಕಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲದೆ ನಗರದ ವಿವಿಧ ಕಡೆ ಆತನಿಗಾಗಿ ಶೋಧ ನಡೆಯುತ್ತಿದೆ.
ಬೆಳಗ್ಗೆ 7.30ರ ವೇಳೆಗೆ ಆರೋಪಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದು, ಇದರ ಸಿಸಿಟಿವಿ ದಾಖಲೆಗಳು ಲಭಿಸಿವೆ. ಈತನ ಬಗ್ಗೆ ಮಾಹಿತಿ ಸಿಕ್ಕವರು ಪಾಂಡೇಶ್ವರ ಠಾಣೆಗೆ ತಿಳಿಸಬಹುದೆಂದು ವಾಯ್ಸ ಸಂದೇಶ ಕಳುಹಿಸಲಾಗಿದೆ.