ಜಿಲ್ಲೆ

ಕುಖ್ಯಾತ ಸರ ಕಳ್ಳನ ಸೆರೆ ಹಿಡಿದ ಸಿಸಿಬಿ ಪೊಲೀಸರು ಆರೋಪಿ ವಿರುದ್ಧ ದಾಖಲಾಗಿದೆ ರಾಜ್ಯಾದ್ಯಂತ ವಿವಿಧ ಪ್ರಕರಣ

ಹರೀಶ ಎಂ.

ಮಂಗಳೂರು: ಕುಖ್ಯಾತ ಸರಗಳ್ಳನನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಶನಿವಾರ ಬಂಗ್ರಕೂಳೂರಿನಲ್ಲಿ ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ ಭದ್ರಾಪುರ ಎಜ್ಜಲ ಪೋಸ್ಟ್ ಕಣಮಿನಿಕೆ ಗೇಟ್‌ನ ಚಂದ್ರಶೇಖರ ಡಾರ್ಲಿಂಗ್ (29) ಬಂಧಿತ. ಈತನಿಂದ ಚಿನ್ನದ ಸರ ಸಹಿತ ಒಟ್ಟು 2,41,000 ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.


ಬಿಜೈ ಚರ್ಚ್ ಮೈನ್ ರೋಡ್ ನಲ್ಲಿ ಅ.21ರಂದು ಬೆಳಗಿನ ಜಾವ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಮಂಗಳೂರು ಸಿಸಿಬಿ ಘಟಕದಿಂದ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಯನ್ನು ಬಂದಿಸಿ ಆತ ಸುಲಿಗೆ ಮಾಡಿದ್ದ 21.300 ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.


ಆರೋಪಿತನ ಮೇಲೆ ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ, ಕುಂಬ್ಳಗೋಡು, ಬಿಡದಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಕೊಲೆ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳು ದಾಖಲಾಗಿರುತ್ತವೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಈ ಆರೋಪಿ ಪತ್ತೆ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಪಾಲ್ಗೋಂಡಿದ್ದರು.