ಶಿವಮೊಗ್ಗ: ಶಿಕಾರಿಪುರ ಮತ್ತು ಶಿರಾಳಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದ ನಾಲ್ವರು ಸರಗಳ್ಳರನ್ನು ಬುಧವಾರ ಬಂಧಿಸಿರುವ ಪೊಲೀಸರು, ಎರಡು ಪ್ರಕರಣದಲ್ಲಿ 2.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ,1.20 ಲಕ್ಷ ರೂ. ಮೌಲ್ಯದ ಮೂರು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿಕಾರಿಪುರ ತಾಲೂಕಿನ ಭದ್ರಾಪುರದ ಕೃಷ್ಣಪ್ಪ ಅಲಿಯಾಸ್ ಬಾಲಕೃಷ್ಣಪ್ಪ (60), ನೇರಪ್ಪ (42), ಹೊಸೂರು ಗ್ರಾಮದ ವೀರೇಶ (29) ಹಾಗೂ ನ್ಯಾಮತಿ ತಾಲೂಕಿನ ಪಂಚಪ್ಪ (48) ಬಂಧಿತರು.
ಕಳೆದ ಅ.೨೨ರಂದು ತೊಗರ್ಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಸಮ್ಮ ಎಂಬುವರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವಾಗ ಅಪರಿಚಿತರಿಬ್ಬರು ನಕಲಿ ಬಂಗಾರದ ಸರ ತೋರಿಸಿ ಆ ನಕಲಿ ಬಂಗಾರದ ಸರ ಕೊಟ್ಟು ನಂತರ 3,500 ರೂ. ನಗದು ಹಾಗೂ ಒಂದು ಜತೆ ಬಂಗಾರದ ಬೆಂಡೋಲೆಯನ್ನು ಕಿತ್ತು ಪರಾರಿಯಾದ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅರೋಪಿಗಳಿಂದ ಸುಲಿಗೆ ಮಾಡಿದ್ದ ಶಿರಾಳಕೊಪ್ಪ ಠಾಣೆ ಮತ್ತು ಶಿಕಾರಿಪುರ ಪಟ್ಟಣ ಠಾಣೆಯ ತಲಾ ಒಂದೊಂದು ಪ್ರಕರಣದಲ್ಲಿ 2.64 ಲಕ್ಷ ರೂ. ಮೌಲ್ಯದ ಒಟ್ಟು 67 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಉಪಯೋಗಿಸಿರುವ ಮೂರು ದ್ವಿಚಕ್ರ ವಾಹನ ಹಾಗೂ ಒಂದು ಚಾಕುವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಿಕಾರಿಪುರ ಎಎಸ್ಪಿ ಅದ್ದೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿ.ಪಿ.ಐ ಗುರುರಾಜ್ ಮೈಲಾರ್ ಮೇಲುಸ್ತುವಾರಿಯಲ್ಲಿ ಶಿರಾಳಕೊಪ್ಪ ಠಾಣೆ ಪಿಎಸ್ಐ ಟಿ.ರಮೇಶ್, ಶಿರಾಳಕೊಪ್ಪ ಠಾಣೆಯ ಸಿ.ಎಚ್.ಸಿ ಕೋಟ್ರೇಶಪ್ಪ, ಕಿರಣ್ ಕುಮಾರ್, ಗಿರೀಶ್, ಸಿಬ್ಬಂದಿಗಳಾದ ಮಂಜುನಾಥ್, ನಾಗರಾಜ್, ಮಂಜುನಾಯ್ಕ, ರವಿನಾಯ್ಕ, ಕಾಂತೇಶ, ಶಿಕಾರಿಪುರ ಟೌನ್ ಠಾಣೆ ಸಿಬ್ಬಂದಿಗಳಾದ ಪ್ರಶಾಂತ, ನಾಗರಾಜ, ಶಿಕಾರಿಪುರ ಗ್ರಾಮಾಂತರ ಠಾಣೆಯ ವಿನಯ್, ಶಿವಕುಮಾರ್, ಆದರ್ಶ ರವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಆರೋಪಿಗಳನ್ನು ಬಂಧಿಸಿದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ