ಜಿಲ್ಲೆ

ಕುತ್ತಿಗೆಯಿಂದ ಸರ ಕಸಿದು ಪರಾರಿ : ಹಾಡಹಗಲೇ ರಸ್ತೆಯಲ್ಲಿ ನಡೆದ ಕೃತ್ಯ

ಸೌಮ್ಯ ಆರ್

ಮೂಲ್ಕಿ: ಮೂಲ್ಕಿ ಅಕ್ಕಸಾಲಿಗರ ಕೇರಿಯ ರಸ್ತೆಯ ಪ್ರಧಾನ ಅಂಚೆ ಕಚೇರಿ ಬಳಿಯಿಂದ ಶ್ರೀ ವೀರ ಮಾರುತಿ ದೇವಸ್ಥಾನಕ್ಕೆ ಹೋಗುವ ಹಳೆಕೋಟೆ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕುತ್ತಿಗೆಯಲ್ಲಿದ್ದ ಮೂರು ಲಕ್ಷ ರೂ.ಬೆಲೆಬಾಳುವ ಎರಡು ಪವನ್ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಯುವಕನೊಬ್ಬ ಕಸಿದು ಪರಾರಿಯಾಗಿದ್ದಾನೆ. ಅಂಚೆ ಕಚೇರಿ ಬಳಿಯ ನಿವಾಸಿ ನಳಿನಿ ಎ.ನಾಯಕ್(74) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಳಿನಿ ನಾಯಕ್ ಮಧ್ಯಾಹ್ನ ಊಟದ ಬಳಿಕ ವಾಕಿಂಗ್ ಹೋಗಲು ಸಿದ್ಧತೆ ನಡೆಸಿ ಗೇಟಿನ ಬಳಿ ಹೋದಾಗ ಮೂಲ್ಕಿ ಕಡೆಯಿಂದ ಬೈಕ್‌ನಲ್ಲಿ ಬಂದ ಯುವಕ, ನಾಗೇಶ್ ರಾವ್ ಅವರ ಮನೆ ಎಲ್ಲಿ? ಎಂದು ಕೇಳಿದ್ದಾನೆ. ನಳಿನಿ ಅವರು ಗೊತ್ತಿಲ್ಲ ಎಂದಿದ್ದು, ತಮ್ಮ ಮನೆಯ ಬಳಿಯ ವೀರ ಮಾರುತಿ ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದಾರೆ. ಯುವಕ ಬೈಕ್‌ನಲ್ಲಿ ನಳಿನಿ ಅವರನ್ನು ಹಿಂಬಾಲಿಸಿ ಅದೇ ರಸ್ತೆಯ ನೀರಿನ ಟ್ಯಾಂಕ್ ಬಳಿ ಅವರನ್ನು ನಿಲ್ಲಿಸಿ ಚಾಕು ತೋರಿಸಿ ಚೈನ್ ಕೊಡುವಂತೆ ಬೆದರಿಸಿದ್ದಾನೆ. ಆಗ ಮಹಿಳೆ ತಮ್ಮ ಬಳಿ ಇದ್ದ ಕೊಡೆಯಲ್ಲಿ ಆತನ ಕೈಗೆ ಹೊಡೆದಿದ್ದು, ಯುವಕ ಮಹಿಳೆಯನ್ನು ತಳ್ಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ನಳಿನಿ ಕೂಡಲೇ ಸ್ಥಳದಿಂದ ಮನೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸರ ಕಿತ್ತು ಪರಾರಿಯಾದ ಯುವಕ ರಾಷ್ಟ್ರೀಯ ಹೆದ್ದಾರಿ ಉಡುಪಿ ಕಡೆಗೆ ಪರಾರಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯ ಸುಭಾಷ್ ಶೆಟ್ಟಿ ಭೇಟಿ ನೀಡಿದ್ದಾರೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.