ಜಿಲ್ಲೆ

ಚಡ್ಡಿಗ್ಯಾಂಗ್ ಹೊಸ ಅವತಾರವೇ? ಹಳೇ ತಂಡವೇ?

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ನಗರದ ಕುವೆಂಪುನಗರದಲ್ಲಿ ಕಿಟಕಿಗಳ ಸರಳು ಮುರಿದು ದರೋಡೆಗೆ ಯತ್ನಿಸಿದ ದರೋಡೆಕೋರರ ತಂಡದ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿವೆ. ಮೇಲ್ನೋಟಕ್ಕೆ ಇದು ಕುಖ್ಯಾತ ಚಡ್ಡಿಗ್ಯಾಂಗ್ ಕೃತ್ಯ ಎಂಬುದಾಗಿ ಸುದ್ದಿ ಹರಡಿದಿದ್ದರೂ ದುಷ್ಕರ್ಮಿಗಳು ಸೆರೆಯಾಗುವವರೆಗೆ ಇದು ಖಚಿತವಾಗುವುದಿಲ್ಲ.

ಕೆಲವು ವರ್ಷದ ಹಿಂದೆ ರಾಜ್ಯದ ಹಲವು ಕಡೆಗಳಲ್ಲಿ ಸದ್ದು ಮಾಡಿದ್ದ ಚಡ್ಡಿಗ್ಯಾಂಗ್ ತಂಡವೇ ಹೊಸಕೋಟೆಯಲ್ಲಿ ಕಾಣಿಸಿಕೊಂಡಿದೆಯೇ ಅಥವಾ ಹಳೇ ಚಡ್ಡಿಗ್ಯಾಂಗ್ ಮಾದರಿಯಲ್ಲಿ ಹೊಸ ದರೋಡೆಕೋರರು ಹುಟ್ಟಿಕೊಂಡಿದ್ದಾರೆಯೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದ್ದು, ಈ ಹಿಂದಿನ ಚಡ್ಡಿಗ್ಯಾಂಗ್‌ನ ಸಂಪೂರ್ಣ ಮಾಹಿತಿ ಪಡೆದು ತಾಳೆ ಹಾಕುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ.

ಕ್ಯಾಮರಾದಲ್ಲಿ 5 ಮಂದಿ ಸೆರೆ: ಹೊಸಕೋಟೆ ನಗರದ ಕುವೆಂಪು ನಗರದಲ್ಲಿ ಡಿ.23 ರ ರಾತ್ರಿ 2 ಗಂಟೆ ಸುಮಾರಿಗೆ ದರೋಡೆ ಕೋರನೊಬ್ಬ ಮನೆಯ ಕಿಟಕಿಯ ಸರಳು ಮುರಿದು ಮನೆಗೆ ನುಗ್ಗುವ ವಿಲ ಯತ್ನ ನಡೆಸಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರದಲ್ಲಿ ಮುಂದಿನ ಬೀದಿಯಲ್ಲಿನ ಕೆಲವು ಕ್ಯಾಮರಾಗಳಲ್ಲಿ 5 ಮಂದಿ ಚಡ್ಡಿಧರಿಸಿದ್ದ ಮುಸುಕುಧಾರಿಗಳ ಚಲನವಲನ ಪತ್ತೆಯಾಗಿದೆ. ಜತೆಗೆ ಅವರು ಸೊಂಟದಲ್ಲಿ ಮಾರಕಾಸಗಳನ್ನು ಇಟ್ಟುಕೊಂಡಿರುವುದು ಜತೆಗೆ ಸ್ಕೂಡ್ರೈವರ್, ಕಟಿಂಗ್‌ಪ್ಲೇರ್, ಸುತ್ತಿಗೆಯಂತ ವಸ್ತುಗಳನ್ನು ಇಟ್ಟುಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಇದು ಹಳೇಯ ಚಡ್ಡಿಗ್ಯಾಂಗ್‌ನ ಸದಸ್ಯರೇ ಇರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ. ಆದರೆ ಈ ಹಿಂದಿನ ಅನೇಕ ಪ್ರಕರಣಗಳಲ್ಲಿ ವಿವಿಧ ಠಾಣೆಗಳಲ್ಲಿ ಈ ಗ್ಯಾಂಗ್‌ನ ಸದಸ್ಯರು ಪೊಲೀಸರ ಬಲೆಗೆ ಬಿದ್ದಿದ್ದು, ಕೆಲವು ವರ್ಷದಿಂದ ಎಲ್ಲಿಯೂ ಇಂಥ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ದರೋಡೆಕೋರರು ಚಡ್ಡಿಗ್ಯಾಂಗ್ ಮಾದರಿಯಲ್ಲಿ ಕೃತ್ಯಕ್ಕೆ ಮುಂದಾಗಿರಬಹುದು ಎಂಬುದು ಪೊಲೀಸರ ಮತ್ತೊಂದು ಸಂಶಯವಾಗಿದೆ.

ಮನೆ ಎಂದು ತಿಳಿದು ದರೋಡೆ ಯತ್ನ: ಹೊಸಕೋಟೆ ಕುವೆಂಪುನಗರದಲ್ಲಿ ಟ್ರಾನ್ಸ್‌ಪೋರ್ಟ್ ಕಚೇರಿಯಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿರುವ ಕುಟುಂಬವಿದೆ. ದರೋಡೆಕೋರರು ಮನೆ ಎಂದು ತಿಳಿದು ದರೋಡೆಗೆ ಯತ್ನಿಸಿದ್ದಾರೆ. ಆದರೆ ಟ್ರಾನ್ಸ್‌ಪೋರ್ಟ್ ಕಚೇರಿಯಾಗಿದ್ದರಿಂದ ಕಾರ್ಯಾಚರಣೆಯನ್ನು ಅರ್ಧಕ್ಕೆ ಬಿಟ್ಟು ಮರಳಿದ್ದಾರೆ ಎನ್ನಲಾಗಿದೆ.

ಹಲವು ಕಡೆ ಪೊಲೀಸರ ತಪಾಸಣೆ:

ಪ್ರಕರಣ ಸಂಬಂಧ ಕೋಲಾರ, ವೇಮಗಲ್, ನಂದಗುಡಿ, ಪಿಎಸ್‌ಹಳ್ಳಿ ಸೇರಿ ಕೆ.ಆರ್.ಪುರ ವ್ಯಾಪ್ತಿಯಲ್ಲಿ ಆರೋಪಿಗಳಿಗಾಗಿ ಪೊಲೀಸರು ತೀವ್ರ ತಪಾಸಣೆ ಮುಂದುವರೆಸಿದ್ದಾರೆ. ಸ್ಥಳೀಯರಾಗಿದ್ದರೆ ಈ ವ್ಯಾಪ್ತಿಯಲ್ಲಿ ಅವರ ಚಲನವಲನ ಪತ್ತೆ ಹಚ್ಚಬಹುದು ಎಂಬುದು ಪೊಲೀಸರ ಅಂದಾಜಾಗಿದೆ. ಈ ಹಿನ್ನೆಲೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಸಿಸಿ ಟಿವಿ ಕ್ಯಾಮರಾಗಳ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆಯ ಚಡ್ಡಿಗ್ಯಾಂಗ್ ಅಥವಾ ಹೊಸದಾಗಿ ಹುಟ್ಟಿಕೊಂಡಿರುವ ದರೋಡೆಕೋರರು ಚಡ್ಡಿಗ್ಯಾಂಗ್ ಮಾದರಿಯಲ್ಲಿ ದರೋಡೆಗಿಳಿದಿರಬಹುದೆ ಎಂಬ ಬಗ್ಗೆ ಸಂಶಯವಿದೆ. ಮೇಲ್ನೋಟಕ್ಕೆ ಚಡ್ಡಿಗ್ಯಾಂಗ್ ಎಂದು ಗುರುತಿಸಬಹುದಾದರೂ ದುಷ್ಕರ್ಮಿಗಳು ಸಿಗುವವರೆಗೆ ಖಚಿತಪಡಿಸಲಾಗುವುದಿಲ್ಲ. ದರೋಡೆಕೋರರ ಸೆರೆಗೆ ವಿಶೇಷ ತಂಡ ರಚಿಸಲಾಗಿದ್ದು ಶೀಘ್ರದಲ್ಲೇ ಗ್ಯಾಂಗ್‌ನ್ನು ಸೆರೆಹಿಡಿಯಲಾಗುವುದು.

ಶಂಕರಗೌಡ ಪಾಟೀಲ್ ಡಿವೈಎಸ್‌ಪಿ ಹೊಸಕೋಟೆ

ಮಕ್ಕಳಿಗೆ ಕ್ರಿಸ್‌ಮಸ್ ರಜೆ, ಇನ್ನೇನು ಕಾಲಿಡಲಿರುವ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಜನರು ಹೊರಗಡೆ ಪ್ರಯಾಣ ಬೆಳೆಸುವ ಸಂದರ್ಭ ಹೆಚ್ಚಿದೆ. ಬೀಗ ಹಾಕಿದ ಮನೆಗಳೇ ದರೋಡೆಕೋರರ ಟಾರ್ಗೆಟ್ ಆಗಿರುವುದರಿಂದ ಇಂಥ ಸಂದರ್ಭವನ್ನು ದುಷ್ಕರ್ಮಿಗಳು ಬಳಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆ ವಹಿಸಬೇಕಿದೆ. ದರೋಡೆಕೋರರ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.

ಅಶೋಕ್, ಇನ್ಸ್‌ಪೆಕ್ಟರ್ ಹೊಸಕೋಟೆ ಠಾಣೆ

ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಯಲ್ಲಿ ದರೋಡೆಕೋರರು ಉತ್ತರ ಭಾರತವರಂತೆ ಕಾಣುತ್ತಿದ್ದು, ಕುಖ್ಯಾತ ಚಡ್ಡಿಗ್ಯಾಂಗ್ ಎಂಬ ಸಂಶಯ ಬಲವಾಗಿದೆ, ಈ ದರೋಡೆಕೋರರು ಬೀಗ ಹಾಕಿರುವ ಮನೆಗಳನ್ನೇ ಗುರುತಿಸಿ ಕಳ್ಳತನ ಮಾಡುತ್ತಾರೆ, ಕಳ್ಳತನದ ವೇಳೆ ಹಲ್ಲೆ, ಹತ್ಯಾಯತ್ನವೂ ನಡೆಯುತ್ತದೆ ಈ ಹಿನ್ನೆಲೆಯಲ್ಲಿ ಜನ ಎಚ್ಚರಿಕೆ ವಹಿಸಬೇಕು ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಪೊಲೀಸ್ ಠಾಣೆ ಅಥವಾ ಹೆಲ್ತ್‌ಲೈನ್ 112 ಕರೆ ಮಾಡಬೇಕು, ಅಥವಾ ಹೊಸಕೋಟೆ ಠಾಣೆ ದೂರವಾಣಿ 080 27931570 ಅಥವಾ ಪೊಲೀಸ್ ಇನ್ಸ್ ಪೆಕ್ಟರ್ ದೂರವಾಣಿ 9480802432 ಸಂಖ್ಯೆಗೆ ತಕ್ಷಣ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ,