ಚಾಮರಾಜನಗರ: ಮಾನವ ಹಕ್ಕುಗಳ ಉಲ್ಲಂಘನೆ ದೇಶದ ಅಭಿವೃದ್ದಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಓ.ಡಿ.ಪಿ.ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಮತ್ತು ಮಾನವ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನ ಅತ್ಯುನ್ನತ ಗ್ರಂಥವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಘನತೆ, ಸ್ವಾತಂತ್ರ್ಯ, ಭಾತೃತ್ವ, ಗೌರವದಿಂದ ಸಮಾಜದಲ್ಲಿ ಬದುಕಬೇಕು ಎಂದು ತಿಳಿಸುತ್ತದೆ. ಸಂವಿಧಾನದ ಅಡಿಯಲ್ಲಿ ಕಾನೂನುಗಳು ರಚನೆಯಾಗುತಿದ್ದು. ಸಂವಿಧಾನ ನಮಗೆ ಅನೇಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದ್ದು. ಅದನ್ನು ಪಾಲಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು, ಸಂವಿಧಾನಕ್ಕೆ ಕುಂದು ತರುವ ಘಟನೆಗಳು ನಡೆಯುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿದೆ. ಗ್ರಾಮಗಳಲ್ಲಿ ಬಹಿಷ್ಕಾರ ಅನ್ನೋ ಸಾಮಾಜಿಕ ಪಿಡುಗು ಚಾಲ್ತಿಯಲ್ಲಿದ್ದು, ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅನ್ಯಾಯದ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬಾಲ ನ್ಯಾಯಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಮಾನವ ಹಕ್ಕುಗಳು ಎಂದರೆ ಮಾನವ ತನಗೆ ಬೇಕಾದ ಆಹಾರ, ಬಟ್ಟೆ , ಧರ್ಮ, ಭಾಷೆ , ಸುರಕ್ಷಿತ ಸಮಾಜದಲ್ಲಿ ವಾಸ ಮಾಡುವ ಹಕ್ಕು ಹೊಂದಿದ್ದು. ಅದು ಸಿಗದೆ ಇದ್ದಾಗ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಸಾಮಾನ್ಯನ ಮೇಲೆ ಆಗುವ ಶೋಷಣೆ ತಡೆದು ಅವರ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದೆ. ಮಕ್ಕಳಿಗೂ ಸಹ ಅವರದೇ ಆದ ಹಕ್ಕುಗಳಿವೆ ಎಂದು ಹೇಳಿದರು.
ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಮಹೇಶ್, ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಶ್ರೀದೇವಿ, ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧಿಕಾರಿ ಸೋಮಶೇಖರ್, ಆಯೋಜನೆ ಕ್ಷೇತ್ರ ಸಂಯೋಜಕಿ ಲತಾ, ವಲಯ ಸಂಯೋಜಕ ಸಿದ್ದರಾಜು, ಕಾರ್ಯಕರ್ತರಾದ ರೇಖಾಮಣಿ, ಸರೋಜ, ಮರಿಜೋಸೆಫ್, ರವಿಕುಮಾರ್ ಮಹಿಳೋದಯ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.