ಜಿಲ್ಲೆ

ಚ.ಕಿತ್ತೂರು ಅಂದಕ್ಕೆ ಬಿಗ್​ ಯೋಜನೆ

ಎಂ.ಎಸ್​.ಹಿರೇಮಠ ಬೆಳಗಾವಿ

ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು

ಬ್ರಿಟಿಷರ ದಬ್ಬಾಳಿಕೆಗೆ ಮೂಗುದಾರ ಹಾಕಿದ ವೀರರಾಣಿ ಚನ್ನಮ್ಮನ ನಾಡು ಕಿತ್ತೂರು ಪಟ್ಟಣಕ್ಕೆ ಅಭಿವೃದ್ಧಿ ಭಾಗ್ಯ ಬಂದಿದ್ದು, ಜನರು ನಿಟ್ಟಿಸಿರು ಬಿಡುವಂತಾಗಿದೆ. ಪಟ್ಟಣ ಅಂದಗೊಳಿಸಲು ರಸ್ತೆ ಅಗಲೀಕರಣದ ಯೋಜನೆಗೆ ಕೆಲಸ ಭರದಿಂದ ಸಾಗಿದೆ.

1990ರಲ್ಲಿ ದಿವಂಗತ ಎಸ್​. ಬಂಗಾರಪ್ಪ ಅವರ ಮಾಸ್ಟರ್​ ಪ್ಲಾ$್ಯನ್​ ಅರ್ಧಕ್ಕೆ ನಿಂತು ಮೂರು ದಶಕಗಳೇ ಕಳೆದಿದ್ದವು. ಹಲವು ಅಡೆತಡೆಗಳಿಂದ ಹಾಗೆ ಉಳಿದು ಪಟ್ಟಣದ ಬೀದಿಗಳು ಅಭಿವೃದ್ಧಿಯಿಂದ ಮರೀಚಿಕೆಯಾಗಿದ್ದವು. ಆದರೆ ಈಗ ಶಾಸಕ ಬಾಬಾಸಾಹೇಬ ಪಾಟೀಲ ಪಟ್ಟಣದ ನಿವಾಸಿಗಳ ಮನವೊಲಿಸಿ ಕೆಲವು ತಿಂಗಳುಗಳು ಹಿಂದೆ ರಾಜ್ಯಮಾರ್ಗವಾದ ಅರಳಿ ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ಅಗಲೀಕರಣ ಪೂರ್ಣಗೊಳಿಸಿ, ಅಂಡರ್​ ಗ್ರೌಂಡ್​, ವಿದ್ಯುತ್​ ಸಂಪರ್ಕ, ರಸ್ತೆ ಉದ್ದಕ್ಕೂ ದೀಪಾಲಂಕಾರ ಹಾಗೂ ಹೊಸ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.

ಸೋಮವಾರಪೇಟೆ ರಸ್ತೆ ಅಗಲೀಕರಣ: 5 ಕೋಟಿ ರೂ. ಅನುದಾಣದಲ್ಲಿ ಗೊಂಬಿ ಗುಡಿಯಿಂದ ಬಸಾಪುರ ರಸ್ತೆವರೆಗೆ ಅಗಲೀಕರಣಕ್ಕೆ ಕೆಲವು ದಿನಗಳಿಂದ ಅಳತೆ ಮಾಡಿ ಗುರುತು ಹಾಕಲಾಗಿದೆ. ಕೋಟೆ ಮುಂದಿನ ಅರಳಿ ಕಟ್ಟೆ ವೃತ್ತವು ಅಗಲೀಕರಣವಾಗಲಿದೆ. ಕೆಲವು ದಿನಗಳಲ್ಲಿ ಈ ರಸ್ತೆ ಅಗಲೀಕರಣದ ಕಾಮಗಾರಿ ಕೂಡ ಪ್ರಾರಂಭವಾಗಲಿದೆ. ಅಲ್ಲದೆ ಬೇರೆ ಬೇರೆ ರಸ್ತೆ ಅಭಿವೃದ್ಧಿಯ ಯೋಜನೆಗಳನ್ನೂ ಸಿದ್ಧಪಡಿಸಲಾಗಿದೆ.

ಅಂದಗೊಳ್ಳಲಿದೆ ಕೋಟಿಯ ಮುಖ್ಯ ರಾಜ ರಸ್ತೆಗಳು:

ಕೋಟೆಯ ಪ್ರಮುಖ ರಾಜ್ಯಮಾರ್ಗ ಅರಳಿಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಚರಂಡಿ ಕಾಮಗಾರಿ ಮುಗಿದು, ಅಂಡರ್​ ಗ್ರೌಂಡ್​ ವಿದ್ಯುತ್​ ಅಳವಡಿಕೆ ಕಾಮಗಾರಿ ಪ್ರಾರಂಭವಾಗಿದೆ. ರಸ್ತೆ ಕಾಮಗಾರಿ ಹಾಗೂ ಎರಡು ಬದಿ ಹೈಟೆಕ್​ ವಿದ್ಯುತ್​ ಅಲಂಕಾರ ಅಳವಡಿಕೆ ಆಗಲಿದೆ. ಇದೇ ರೀತಿ ಈಗ ಅಗಲೀಕರಣವಾಗಲಿರುವ ಸೋಮವಾರಪೇಟೆಯ ಅಗಲೀಕರಣದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಸೇರುವ ರಾಜ್ಯಮಾರ್ಗವಾಗಿದ್ದು ಎರಡು ರಸ್ತೆಗಳು ಅಂದಗೊಳಿಸುವ ಯೋಜನೆ ಸಿದ್ಧವಾಗಿ ಕಾಮಗಾರಿ ಪ್ರಗತಿಯಲ್ಲಿವೆ. ಪಟ್ಟಣದ ಬೀಡಿ ಕ್ರಾಸ್​ದಿಂದ ಸೈನಿಕ ಶಾಲೆವರೆಗೆ ಅಗಲೀಕರಣ ಕೂಡ ಆಗಲಿದ್ದು ಈಗಾಗಲೇ ಟೆಂಡರ್​ ಆಗಿದೆ.

ಒಟ್ಟಿನಲ್ಲಿ ಪಟ್ಟಣ ಸೇರಿ ಇತಿಹಾಸ ಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ಐತಿಹಾಸಿಕ ಕಿತ್ತೂರು ನೋಡಲು ಪ್ರವಾಸಿಗರು ಬಂದು ನಿರಾಸೆಯಿಂದ ತೆರಳುತ್ತಿದ್ದರು. ಆದರೆ ಇನ್ಮುಂದೆ ಕಿತ್ತೂರು ಚಿತ್ರಣವೇ ಬದಲಾಗಲಿದೆ. ನಾಡ ಅಭಿವೃದ್ಧಿಗಾಗಿ ಸತತ ಪ್ರಯತ್ನ ಮಾಡುತ್ತೇನೆ.

> ಬಾಬಾಸಾಹೇಬ ಪಾಟೀಲ ಶಾಸಕ, ಚನ್ನಮ್ಮನ ಕಿತ್ತೂರು.

ಐತಿಹಾಸಿಕ ರಾಣಿ ಚನ್ನಮ್ಮಾಜಿಯ ಕಿತ್ತೂರಿಗೆ ಪ್ರವಾಸಿಗರು ಬಂದು ಹಿಡಿ ಶಾಪ ಹಾಕಿ ಹೋಗುವಂತಾಗಿತ್ತು. ಕೆಲವು ದಿನಗಳಿಂದ ಪಟ್ಟಣ ಸೇರಿ ಕೋಟೆಯಲ್ಲಿಯ ಅಭಿವದ್ಧಿ ಕಾಮಗಾರಿಗಳು ಭರದಿಂದ ಸಾಗಿದ್ದು ನಾಡ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

> ಪ್ರವಿಣ ಶೆಟ್ಟರ ಪಟ್ಟಣದ ನಿವಾಸಿ