ಜಿಲ್ಲೆ

ಪ್ಲಾಸ್ಟಿಕ್‌ನಿಂದ ಜೀವಸಂಕುಲಕ್ಕೆ ಸಂಕಷ್ಟ : ಇಪ್ಟಾ ಅಧ್ಯಕ್ಷ ಗಣೇಶ್ ಭಡ್ತಿ

ಸದೇಶ್ ಕಾರ್ಮಾಡ್

ಮೈಸೂರು: ವಿಶ್ವದಲ್ಲಿ 450 ಮಿಲಿಯನ್ ಟನ್ ಪ್ಲಾಸ್ಟಿಕ್ ಪ್ರತಿ ವರ್ಷ ಉತ್ಪಾದನೆಯಾಗುತ್ತಿದ್ದು, 2050ರ ಹೊತ್ತಿಗೆ ಈ ಪ್ರಮಾಣ 600 ಮಿಲಿಯನ್ ಟನ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ಲಾಸ್ಟಿಕ್‌ನಿಂದ ಭೂಮಿ, ಸಾಗರ ಹಾಗೂ ಜೀವಸಂಕುಲಕ್ಕೆ ಬಹುದೊಡ್ಡ ಸಂಕಷ್ಟ ಎದುರಾ ಗಿದ್ದು, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್ ಬಳಸುವ ತುರ್ತು ಅನಿವಾರ್ಯತೆ ಇದೆ ಎಂದು ಭಾರತೀಯ ಪಲ್ಪ್ ಮತ್ತು ಕಾಗದ ತಾಂತ್ರಿಕ ಸಂಘದ (ಇಪ್ಟಾ) ಅಧ್ಯಕ್ಷ ಗಣೇಶ್ ಭಡ್ತಿ ಅಭಿಪ್ರಾಯಪಟ್ಟರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಗುರುವಾರ ಇಂಡಿಯನ್ ಪಲ್ಪ್ ಆ್ಯಂಡ್ ಪೇಪರ್ ಟೆಕ್ನಿಕಲ್ ಅಸೋಸಿಯೇಷನ್(ಇಪ್ಟಾ) ಹಾಗೂ ಸಿಎಫ್‌ಟಿಆರ್‌ಐ ವತಿಯಿಂದ ಆಹಾರದ ಪ್ಯಾಕೇಜಿಂಗ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಾಗರಗಳು ಪ್ಲಾಸ್ಟಿಕ್ ತ್ಯಾಜ್ಯದ ಆಗರವಾಗುತ್ತಿದ್ದು, ವಿಶ್ವದ 5 ಸಮುದ್ರಗಳ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಅತ್ಯಂತ ಕೆಟ್ಟ ಪರಿಣಾಮ ಬೀರಿದ್ದು, ಅದರಲ್ಲಿ ಹಿಂದೂ ಮಹಾಸಾಗರ ಕೂಡ ಒಂದಾಗಿದೆ. ಪ್ಲಾಸ್ಟಿಕ್ ಮರು ಬಳಕೆ ಪ್ರಮಾಣ ಶೇ.6 ರಿಂದ 7ರಷ್ಟು ಮಾತ್ರ ಇದ್ದು, ಉಳಿದ ಪ್ಲಾಸ್ಟಿಕ್‌ಗಳು ಭೂಮಿ ಹಾಗೂ ಸಮುದ್ರ ಸೇರುತ್ತಿದ್ದು, ಜೀವಸಂಕುಲದ ಮೇಲೆ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್ ಉದ್ಯಮ ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳ ಇದ್ದು, ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

25 ವರ್ಷದ ಹಿಂದೆ ಉತ್ತರ ಫೆಸಿಫಿಕ್ ಸಾಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ದ್ವೀಪವೇ ನಿರ್ಮಾಣಗೊಂಡಿತ್ತು. ಬ್ರಿಟನ್‌ನ ಸಾಗರ ವಿಜ್ಞಾನಿ ಯೊಬ್ಬರು ಇದನ್ನು ಗುರುತಿಸಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಎಚ್ಚರಿಸಿದ್ದರು. ಪ್ಲಾಸ್ಟಿಕ್ ತ್ಯಾಜ್ಯದ ಕಣಗಳು ನೀರು, ಗಾಳಿ, ಮಣ್ಣಿನಲ್ಲಿ ಬೆರೆತ್ತಿರುವ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್‌ಅನ್ನ ಸರ್ಕಾರ ನಿಷೇಧಿಸಿದ್ದು, ಇದರ ಬದಲು ಕಾಗದ ಕೈಚೀಲಗಳನ್ನು ಹೆಚ್ಚಾಗಿ ಬಳಸಬೇಕು. ಆಹಾರ ಪದಾರ್ಥಗಳ ಪ್ಯಾಕೇಜಿಂಗ್‌ಗೆ ಕಾಗದವನ್ನು ಬಳಕೆ ಮಾಡಬೇಕು ಎಂದು ಹೇಳಿದರು.

ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಸಿಂಗ್ ಮಾತನಾಡಿ, ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು ಪ್ಯಾಕೇಜಿಂಗ್ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪ್ರಸ್ತುತ ಆಹಾರ ಪದಾರ್ಥಗಳ ಪ್ಯಾಕೆಜಿಂಗ್‌ಗೆ ಹೆಚ್ಚಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದ್ದು, ಇದರ ಬದಲು ಕಾಗದ ಬಳಕೆ ಪ್ರಮಾಣ ಹೆಚ್ಚಾಗಬೇಕು ಎಂದರು.

ಐಟಿಸಿ ಕಂಪನಿ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎನ್.ಶ್ರೀಧರ್ ಮಾತನಾಡಿ, ಯೂರೋಪ್ ದೇಶಗಳಲ್ಲಿ ಪ್ಲಾಸ್ಟಿಕ್ ಮರು ಬಳಕೆ ಮಾಡದೆ ಇದ್ದರೆ ದಂಡ ವಿಧಿಸಲಾಗುತ್ತಿದ್ದು, ಅಂತಹ ವ್ಯವಸ್ಥೆ ನಮ್ಮಲ್ಲೂ ಬರಬೇಕು. ಪ್ಲಾಸ್ಟಿಕ್ ಬಳಕೆ ತಡೆಯಲು ಕಠಿಣ ಕಾನೂನು ಕ್ರಮಗಳು ಜಾರಿಗೆ ಬರಬೇಕು ಎಂದು ಹೇಳಿದರು.

ಕಳೆದ 15 ವರ್ಷದಲ್ಲಿ ಕಾಗದ ಉದ್ಯಮ ಸಾಕಷ್ಟು ಬದಲಾಗಿದ್ದು, ಇದೀಗ ಶೇ.50ರಷ್ಟು ಕಾಗದ ಮರು ಬಳಕೆಯಾಗುತ್ತಿದೆ. ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಬೇಕು.ಆಹಾರದ ಪ್ಯಾಕೇಜಿಂಗ್‌ನಲ್ಲೂ ಕಾಗದವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಇಪ್ಟಾ ಕಾರ್ಯದರ್ಶಿ ಎಂ.ಕೆ.ಗೋಯಲ್, ಕಾರ್ಯಕ್ರಮ ಸಮಿತಿ ಮುಖ್ಯಸ್ಥ ಪ್ರೊ.ರಾಜೇಶ್ವರ್ ಎಸ್.ಮಟ್ಚೆ, ಐಪಿಎಂಎ ಅಧ್ಯಕ್ಷ ಪವನ್ ಅಗರ್ವಾಲ್ ಇದ್ದರು.