ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ದೇವಸ್ಥಾನಗಳ ಸಮಿತಿ ಹಾಗೂ ಮಾತೃಭೂಮಿ ಸೇವಾ ಸಂಘದ ವತಿಯಿಂದ ಸೆ. 10ರಂದು ಇಲ್ಲಿನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಗೆ ನಗರದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಪ್ರಶಂಸನಾ ಪ್ರಮಾಣ ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ ಎಂದು ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಹು-ಧಾದಲ್ಲಿ ಗಣೇಶೋತ್ಸವನ್ನು ಆಕರ್ಷಕವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಅಭಿನಂದಿಸಲಾಗುವುದು ಎಂದರು.
ಯುವ ಜನರಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮನೋಭಾವ ಬೆಳೆಸಲು ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ದೇವಸ್ಥಾನಗಳ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಮಿತಿ ಅಧ್ಯಕ್ಷ ಎಸ್.ಆರ್. ರಾಮನಗೌಡರ, ವೀರೇಶ ಕೆಲಗೇರಿ, ನಿತಿನ ರಾಮದುರ್ಗ, ಸುಭಾಷ ಆಕಳವಾಡಿ, ಮಂಜುನಾಥ ಶಿಗ್ಗಾವಿ, ಶಿವಯ್ಯ ಹಿರೇಮಠ, ಅಶೋಕ ಸೋಮಾಪುರ, ಇತರರು ಇದ್ದರು.