ಜಿಲ್ಲೆ

ಆರ್ಡರ್ ಇಲ್ಲದೆ ಅಕ್ಕಸಾಲಿಗರ ಕೈ ಲಾಕ್

Chikkamagaluru

ಕಡೂರು: ಲಾಕ್​ಡೌನ್ ಆದಾಗಿನಿಂದ ಚಿನ್ನಾಭರಣ ತಯಾರಿಕೆಗೆ ಆರ್ಡರ್​ಗಳಿಲ್ಲದೆ ಅಕ್ಕ ಸಾಲಿಗರು ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ. ಕೆಲವೇ ಮಂದಿ ಕಡಿಮೆ ಪ್ರಮಾಣದಲ್ಲಿ ಆಭರಣ ತಯಾರಿಕೆಗೆ ಆರ್ಡರ್ ನೀಡುತ್ತಿದ್ದಾರೆ. ಇದರಿಂದ ಅಕ್ಕಸಾಲಿಗರಿಗೆ ಹೆಚ್ಚೇನು ಆದಾಯ ಬರುತ್ತಿಲ್ಲ.

ಮಾರ್ಚ್, ಏಪ್ರಿಲ್, ಮೇನಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳು ನಡೆಯುವ ಕಾಲ. ಇಂತಹ ವೇಳೆಯಲ್ಲಿ ಅನೇಕ ಮಂದಿ ಅಕ್ಕಸಾಲಿಗರಿಗೆ ಆರ್ಡರ್ ಕೊಟ್ಟು ಚಿನ್ನಾಭರಣ ತಯಾರಿಸಿಕೊಳ್ಳುತ್ತಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಮದುವೆ ಸಮಾರಂಭ ಮುಂದೂಡಲಾಗಿದೆ. ಹೀಗಾಗಿ ಅಕ್ಕಸಾಲಿಗರಿಗೆ ಚಿನ್ನಾಭರಣ ತಯಾರಿಕೆಗೆ ಆರ್ಡರ್ ಬರುತ್ತಿಲ್ಲ. ಇದರಿಂದ 80ಕ್ಕೂ ಹೆಚ್ಚು ಕುಟುಂಬಗಳು ಬರಿಗೈಲಿವೆ.

ಸಾಮಾನ್ಯವಾಗಿ ಒಂದು ಮದುವೆಗೆ 50ರಿಂದ 100 ಗ್ರಾಂ ಬಂಗಾರದಿಂದ ಚಿನ್ನಾಭರಣ ತಯಾರಿಸಿಕೊಳ್ಳುತ್ತಾರೆ. ಲಾಕ್​ಡೌನ್​ನಿಂದಾಗಿ 3 ಗ್ರಾಂ ತಾಳಿ, ಒಂದು ಜೊತೆ ಕಾಲುಂಗರಕ್ಕೆ ಸೀಮಿತವಾಗಿರುವುದರಿಂದ ಅಕ್ಕಸಾಲಿಗರಿಗೆ ಆದಾಯ ಇಲ್ಲದಂತಾಗಿದೆ.

ಪ್ರತಿ ವರ್ಷ ಕನಿಷ್ಠ 40 ತಾಳಿಗಳು, ಕಾಲುಂಗರ ಹಾಗೂ ಇತ್ಯಾದಿ ಆಭರಣಗಳನ್ನು ತಯಾರಿಸುತ್ತಿದ್ದೆವು. ಈ ಬಾರಿ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ಚಿನ್ನಾಭರಣ ಮಾಡಿಸಲು ಯಾರೂ ಮುಂದೆ ಬರುತ್ತಿಲ್ಲ. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವರು ಸಾಲ ಮಾಡಿ ಮದುವೆ ಮಾಡುವ ಬಡ ಕುಟುಂಬದ ಗ್ರಾಹಕರು ನಮ್ಮನ್ನು ನಂಬಿ ಬರುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಅಳಿದುಳಿದ ಚಿನ್ನದಲ್ಲಿ ಮಂಗಳಸೂತ್ರವನ್ನು ಸೂಕ್ತ ಸಮಯಕ್ಕೆ ತಯಾರಿಸಿ ಕೊಡುತ್ತೇವೆ ಎನ್ನುತ್ತಾರೆ ಚಿನ್ನ ಬೆಳ್ಳಿ ಕೆಲಸಗಾರ ಆರ್. ಮಹೇಶ್. ಸರ್ಕಾರ ಇಂತಹವರನ್ನೂ ಗುರುತಿಸಿ ನೆರವಾಗಬೇಕಿದೆ.