ಬಾಗೇಪಲ್ಲಿ: ಪೂರ್ವಕಾಲದಲ್ಲಿ ಬಡವರು ಬೆಳೆಯುತ್ತಿದ್ದ ಸಿರಿಧಾನ್ಯ ಇಂದು ಶ್ರೀಮಂತರ ಆರೋಗ್ಯ ಕಾಪಾಡುವ ಶ್ರೇಷ್ಠ ಆಹಾರ ಪದಾರ್ಥಗಳಾಗಿದ್ದು, ಹೆಚ್ಚು ಪೋಷಕಾಂಶವುಳ್ಳ ಸಿರಿಧಾನ್ಯಗಳು ಉತ್ತಮ ಆರೋಗ್ಯಕ್ಕೆ ವರದಾನವಾಗಿವೆ. ಹಾಗಾಗಿ ಪ್ರತಿಯೊಬ್ಬರು ಆಹಾರ ಸಿರಿಧಾನ್ಯ ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಿಕರು ಸಿರಿಧ್ಯಾನ ಬೆಳೆಯುವ ಹಾಗೂ ಸೇವಿಸುವ ಪದ್ಧತಿಯನ್ನು ರೂಢಿಯಲ್ಲಿಟ್ಟುಕೊಂಡಿದ್ದರು. ಕ್ರಮೇಣ ಮಾರುಕಟ್ಟೆ ವ್ಯವಸ್ಥೆ ಕೊರತೆಯಿಂದ ಸಿರಿಧಾನ್ಯ ಬೆಳೆಯುವುದನ್ನು ರೈತರು ಕೈಬಿಟ್ಟರು. ಆದರೇ, ಪ್ರಸ್ತುತ ಕಾಲಘಟ್ಟದಲ್ಲಿ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಸಿರಿಧಾನ್ಯ ಬಳಕೆ ಉಪಯುಕ್ತವಾಗಿದೆ. ಸಿರಿಧಾನ್ಯಗಳು ಹೆಚ್ಚು ಪೋಷಕಾಂಶಗಳಿಂದ ಕೂಡಿರುವುದರಿಂದ ಪ್ರತಿಯೊಬ್ಬರೂ ಸಿರಿಧಾನ್ಯ ಸೇವನೆಗೆ ಮುಂದಾಗುತ್ತಿದ್ದಾರೆ. ಸಿರಿಧಾನ್ಯಗಳ ಬಳಕೆ ಬಗ್ಗೆ ಇಡೀ ವಿಶ್ವವೇ ಗಮನ ಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಲ್ಲೂ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಬೆಳೆಯಲು ರೈತರು ಆಸಕ್ತಿ ತೋರಬೇಕು. ಖಾಸಗಿ ಕಂಪನಿಗಳು ಸಹ ಸಿರಿಧಾನ್ಯಗಳ ಖರೀದಿಗೆ ಮಾರುಕಟ್ಟೆ ಕಲ್ಪಿಸುತ್ತಿರುವುದರಿಂದ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಯ ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಸಾಮಗ್ರಿಗಳನ್ನು ವಿತರಿಸಿ, ಸಾಧಕ ರೈತರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂಧ್ರ, ಜಿಪಂ ಸಿಒಇ ಪ್ರಕಾಶ್ ನಿಟ್ಟಾಲಿ, ಕೃಷಿ ಜಂಟಿ ನಿರ್ದೇಶಕಿ ಜಾವೀದಾ, ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಉಪ ವಿಭಾಗೀಯ ಅಧಿಕಾರಿ ಅಶ್ವಿನ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ರಮೇಶ್, ಕೃಷಿ ಸಮಾಜದ ಅಧ್ಯಕ್ಷ ತಿಮ್ಮಂಪಲ್ಲಿ ಚೌಡರೆಡ್ಡಿ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ನರಸಿಂಹನಾಯ್ಡು ಇದ್ದರು.
ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಡ್ಯಾಂ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರವು ಸಿರಿಧಾನ್ಯ ಮೇಳ ಆಯೋಜಿಸುವ ಮೂಲಕ ಜನರ ಆರೋಗ್ಯ ಕಾಪಾಡುತ್ತಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಲೆ ಸಿಗದ ಕಾರಣ ಸಿರಿಧಾನ್ಯ ಬೆಳೆಯುವುದನ್ನು ನಿಲ್ಲಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು ಸಿರಿಧಾನ್ಯ ಬೆಳೆ ಬೆಳೆಯುವ ರೈತರಿಗೆ ಸರ್ಕಾರದಿಂದ ಪ್ರೋತ್ಸಾಹಿಸಬೇಕು. ಸಿರಿಧಾನ್ಯ ಉತ್ಪಾದನೆ, ಉಪಯೋಗ, ಮಹತ್ವದ ಅರಿವು ಮೂಡಿಸಬೇಕು ಎಂದರು. ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದ ಬಳಿಯ ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ 185 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದರು.
ಸಂಸದರನ್ನೇ ಮರೆತಿದ್ದ ಜಿಲ್ಲಾಡಳಿತ
ಬಾಗೇಪಲ್ಲಿ ಪಟ್ಟಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಕಾರ್ಯಕ್ರಮದ ್ಲ್ಲೆಕ್ಸ್‌ಗಳಲ್ಲಿ ಸಂಸದ ಡಾ.ಕೆ.ಸುಧಾಕರ್ ಭಾವಚಿತ್ರವೇ ಇರಲಿಲ್ಲ. ಇದನ್ನು ೆಟೋ ತೆಗೆದು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಕೃಷಿ ಜಂಟಿ ನಿರ್ದೇಶಕರಿಗೆ ಕಳುಹಿಸಿದ ಪುರಸಭೆ ಸದಸ್ಯ ಆ.ನ.ಮೂರ್ತಿ ಅವರು, ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಹಳೇ ್ಲೆಕ್ಸ್‌ಗಳನ್ನು ತೆರವುಗೊಳಿಸಿ, ಸಂಸದರ ೆಟೋ ಇರುವ ಪ್ಲೆಕ್ಸ್‌ಗಳನ್ನು ಮರುಮುದ್ರಣ ಮಾಡಿ, ಅಳವಡಿಸಿತು.
ಜನ ಜಾಗೃತಿ
ಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ರೈತರು, ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ವೀಕ್ಷಿಸಿ ಮಾಹಿತಿ ಪಡೆದರು. ಯೋಜನೆಯ ಕರಪತ್ರಗಳು ಹಾಗೂ ಭಿತ್ತಿಚಿತ್ರಗಳನ್ನು ಹಂಚುವ ಮೂಲಕ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಸಿರಿಧಾನ್ಯಗಳ ರಾಶಿ, ವಿವಿಧ ಕೃಷಿ ಮತ್ತು ತೋಟಗಾರಿಕೆ ಯಂತ್ರಗಳ ಪ್ರಾತ್ಯಕ್ಷಿಕೆ, ಫಲಪುಷ್ಪ ಪ್ರದರ್ಶನಗಳು ಗಮನ ಸೆಳೆದವು.