ಸಿಂಧನೂರು: ಸಮೃದ್ಧ ಪೋಷಕಾಂಶಗಳಿರುವ ಸಿರಿಧಾನ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ಹೇಳಿದರು.
ಇದನ್ನೂ ಓದಿ:ಸಿರಿಧಾನ್ಯಗಳು ಪೋಷಕಾಂಶಗಳ ಕಣಜ
ತಾಲೂಕಿನ ಸಿಎಸ್‌ಎಫ್ ಕ್ಯಾಂಪ್‌ನಲ್ಲಿ ರಾಷ್ಟ್ರೀಯ ಬೀಜ ನಿಗಮ ನಿಯಮಿತ ಕೇಂದ್ರ ರಾಜ್ಯ ಫಾರ್ಮ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಬೇಸಾಯದ ಪದ್ಧತಿ ಕುರಿತು ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಿಗೆ ಕಡಿಮೆ ಪ್ರಮಾಣದ ನೀರು ಬೇಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲು ಎದುರಿಸುವ ಸಾಮಾರ್ಥ್ಯ ಹೊಂದಿವೆ. ಸಿರಿಧಾನ್ಯ ಬೆಳೆ ಪರಿಸರ ಸ್ನೇಹಿಯಾಗಿದೆ. ಸರ್ಕಾರ ಸಿರಿಧಾನ್ಯಗಳ ಕೃಷಿಗೆ ಹಾಗೂ ಬಳಕೆಗೆ ಒತ್ತು ನೀಡುತ್ತಿದೆ ಎಂದರು.
ಹೈದರಾಬಾದ್‌ನ ಐಸಿಆರ್-ಐಐಎಂಆರ್ ಹಿರಿಯ ವಿಜ್ಞಾನಿಗಳಾದ ಡಾ.ಸೂಗಣ್ಣ ಹಾಗೂ ಡಾ.ಸಿದ್ದಪ್ಪ ಅವರು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಿದರು. ಬಳ್ಳಾರಿಯ ಎಡಿಎಸ್ಸಿಯ ಶರಣಬಸಪ್ಪ ಅವರು ಸಿರಿಧಾನ್ಯ ಬೀಜ ಉತ್ಪಾದನಾ ಕ್ರಮಗಳ ಬಗ್ಗೆ ವಿವರಿಸಿ ರೈತರಿಗೆ ಟ್ರೈನಿಂಗ್ ಕಿಟ್ ವಿತರಿಸಿದರು. ವಿವಿಧ ಬಗೆಯ ಸಿರಿಧಾನ್ಯ ಬೆಳೆಸುವ ಪದ್ಧತಿ, ಇಳುವರಿ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡಲಾಯಿತು.
ಫಾರ್ಮ್ ನಿರ್ದೇಶಕ ವಿನಯ್ ಕುಮಾರ ಕಾಲಿಕಾರ್, ಸಿಎಸ್‌ಎಫ್ ಜಿಎಂ ಕೆ.ಸಿ. ಶರ್ಮಾ, ಫಾರ್ಮ್ ಸೂಪರಿಂಟೆಂಡೆಂಟ್ ಅರುಣಕುಮಾರ, ಮಾರ್ಕೆಟಿಂಗ್ ಸಹಾಯಕ ಅಧಿಕಾರಿ ಮಂಜುನಾಥ, ಕೃಷಿ ಅಧಿಕಾರಿ ಉಪ್ಪಾಳಪ್ಪ, ಡಾ.ರಘುನಾಥ ಇತರರಿದ್ದರು.