ಜಿಲ್ಲೆ

ಅಂತಾರಾಷ್ಟ್ರೀಯ ಯೋಗಾಚರಣೆಗೆ ಸಿದ್ಧತೆ ಮಾಡಿಕೊಳ್ಳಿ

ಕೊಪ್ಪಳ: ತಾಲೂಕು ಕ್ರೀಡಾಂಗಣದಲ್ಲಿ ಜೂ.21ರಂದು ಬೆಳಗ್ಗೆ 6.30ರಿಂದ 7.30ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿ. ಶಿಷ್ಟಾಚಾರ ಪಾಲಿಸಿ. ಎಲ್ಲ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕೆಂದರು.

ಶಾಲೆ, ಕಾಲೇಜು, ವಸತಿ ಶಾಲೆಗಳಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಭಾಗಿತ್ವ ಮುಖ್ಯ. ಹೆಚ್ಚಿನ ಪ್ರಚಾರ ನಡೆಸಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಿ.

ಯೋಗಾಸನ ಮಾಡಲು ಬೇಕಾದ ಸಿದ್ಧತೆ, ಕುಡಿವ ನೀರು ಸೇರಿ ಇತರ ಸೌಲಭ್ಯ ಕಲ್ಪಿಸಿ. ಪಾರ್ಕಿಂಗ್ ವ್ಯವಸ್ಥಿತವಾಗಿರಲಿ. ಪೊಲೀಸರು, ವಕೀಲರು, ಮಾಜಿ ಸೈನಿಕರು ಸೇರಿ ಇತರರಿಗೆ ಕಾರ್ಯಕ್ರಮ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಪ್ಪಳ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶರಣಪ್ಪ ಹೈದ್ರಿ, ಗಂಗಾವತಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಗುರುರಾಜ ಉಮಚಗಿ, ವೈದ್ಯಾಧಿಕಾರಿಗಳಾದ ಡಾ.ಮಾರುತಿ ದೊಡ್ಡಮನಿ, ಡಾ.ಪ್ರಲ್ಹಾದ ಐಲಿ ಇತರರಿದ್ದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಈ ಬಾರಿ ‘ವಸುದೈವ ಕುಟುಂಬಕಂ’ ಹಾಗೂ ‘ಟ್ಯಾಗ್‌ಲೈನ್ ಹರ್ ಆಂಗನ್ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಯೋಗ ದಿನಾಚರಣೆ ನಡೆಸಲು ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.> ಡಾ.ಯಮನಪ್ಪ ಶಿರವಾರ, ಜಿಲ್ಲಾ ಆಯುಷ್ ಅಧಿಕಾರಿ