ಮಡಿಕೇರಿ: ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ೧೫ ದಿನಗಳ ಕ್ಷೇತ್ರ ಭೇಟಿ ಪರಿಶೀಲನಾ ಆಂದೋಲನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ್ ಮೀನಾ ಅವರು ಇತ್ತೀಚೆಗೆ ಗೃಹನಳ ಸಂಪರ್ಕದ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲಿಸಿದರು.
ಕುಶಾಲನಗರ ತಾಲೂಕಿನ ಸುಂಟಿಕೊಪ್ಪ, ಏಳನೇ ಹೊಸಕೋಟೆ, ನಂಜರಾಯಪಟ್ಟಣ ಗ್ರಾಮಗಳಿಗೆ ಭೇಟಿ ನೀಡಿ ಅವರು, ಜೆಜೆಎಂ ಕಾಮಗಾರಿಯಡಿ ಅಳವಡಿಸಿರುವ ಗೃಹನಳ ಸಂಪರ್ಕದ ಗುಣಮಟ್ಟ, ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಗುಣಮಟ್ಟ ವರದಿಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭ ಗ್ರಾಮಗಳಲ್ಲಿನ ಶಾಲೆ, ಗ್ರಂಥಾಲಯ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿದರು. ನಂತರ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಯೋಜನೆಯ ನೀರು ಶುದ್ಧೀಕರಣ ಘಟಕಗಳು ಹಾಗೂ ನೀರು ಶೇಖರಣ ತೊಟ್ಟಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಯೋಜನೆ ಸ್ಥಾಪಕರು, ಜಿಯಾಲಜಿಸ್ಟ್, ಸಪೋರ್ಟ್ ಇಂಜಿನಿಯರ್‌ಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಒಗಳು, ಅಧ್ಯಕ್ಷರು, ಸದಸ್ಯರು, ನೀರುಗಂಟಿಗಳು ಹಾಜರಿದ್ದರು.