ಬೆಳಗಾವಿ: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಗ್ರಾಪಂ ಆಡಳಿತದ ಜವಾಬ್ದಾರಿ. ಹೀಗಾಗಿ ಶಾಲೆಗಳಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ಜಿಲ್ಲೆಯಲ್ಲಿ ಸವದತ್ತಿ, ರಾಮದುರ್ಗ, ಮೂಡಲಗಿ, ಗೋಕಾಕ, ರಾಯಬಾಗ ತಾಲೂಕುಗಳ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿನ ಜಲ ಜೀವನ್ ಮಿಷನ್(ಜೆಜೆಎಂ) ಕಾಮಗಾರಿ, ಸ್ವಚ್ಛತಾ ಕಾಮಗಾರಿಗಳು, ಸರ್ಕಾರಿ ಶಾಲೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜತೆಗೆ ಮೇಲಿಂದ ಮೇಲೆ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚನೆ ನೀಡಿದರು.
ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಾವಿರಾರೂ ಕೋಟಿ ರೂ. ಖರ್ಚು ಜೆಜೆಎಂ ಸೇರಿ ವಿವಿಧ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಸೌಲಭ್ಯ ಜನರಿಗೆ ಮುಟ್ಟಿಸುವುದು ಅಧಿಕಾರಿಗಳು ಜವಾಬ್ದಾರಿ. ಹೀಗಾಗಿ ಕುಡಿಯುವ ನೀರು ಸದ್ಬಳಕೆ ಆಗಬೇಕು. ಜೆಜೆಎಂ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು. ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಕುರಿತು ಖಚಿತ ಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಮೇಲಿಂದ ಸ್ವಚ್ಛ ಮಾಡಬೇಕು ಎಂದು ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಚರಂಡಿಗಳು ಸ್ವಚ್ಛತೆ ಜತೆಗೆ ಸಾರ್ವಜನಿಕ ಸ್ಥಳಗಳು, ಉದ್ಯಾನವನಗಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ನಳ ಸಂಪರ್ಕ ಒದಗಿಸಿ ನೀರು ಕೊಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.
ಬೆಳಗಾವಿ ವಿಭಾಗ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಇಇ ಕಿರಣ ಗೋರ್ಪಡೆ, ತಾಪಂ ಇಒಗಳಾದ ಆನಂದ ಬಡಕುಂದ್ರಿ, ಬಸವರಾಜ ಐನಾಪುರ, ಎಫ್.ಜಿ.ಚಿನ್ನನವರ, ಸುರೇಶ ಕದ್ದು, ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇಗಳು ತಾಪಂ. ಪಂ.ರಾಜ್ ಗ್ರಾ.ಉ ಸಹಾಯಕ ನಿರ್ದೇಶಕರುಗಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಇತರರಿದ್ದರು.