ಜಿಲ್ಲೆ

ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ; ಸಿಇಒ‌ ರಾಹುಲ ಶಿಂಧೆ ಎಚ್ಚರಿಕೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಹಳ್ಳಿಗಳಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರು ಸೇರಿ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಪಂ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.

ಚನ್ನಮ್ಮ ಕಿತ್ತೂರು ತಾಲೂಕಿನ ಬೈಲೂರು, ದೇವರಶೀಗಿಹಳ್ಳಿ ಗ್ರಾಪಂಗಳಿಗೆ ಮಂಗಳವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕರ ವಸೂಲಾತಿ ಪ್ರಗತಿ, ಇ-ಸ್ವತ್ತುಗಳ ಬೇಡಿಕೆ ಹಾಗೂ ವಿತರಣೆಯ ಬಗ್ಗೆ ಸಂಬಂಧಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಕಾಲಕ್ಕೆ ವಿತರಣೆ ಮಾಡಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಜನರ ಕುಂದುಕೊರತೆಗಳ ನಿವಾರಣೆಗೆ ಒತ್ತು ನೀಡುವುದರ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಬೇಕು ಎಂದರು.

ಗ್ರಾಮದಲ್ಲಿನ ಕೂಸಿನ ಮನೆಗೆ ಹಾಗೂ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳ ಓದಿಗೆ ಅಗತ್ಯವಿರುವ ಪುಸ್ತಕ ಹಾಗೂ ಪಿಠೋಪಕರಣಗಳು ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಬೇಕು.ಕೂಸಿನ ಮನೆಯು ಪ್ರತಿದಿನವೂ ತೆರೆದಿರಬೇಕು. ಮನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಜಿಲ್ಲೆಯಿಂದ ನಿಗಧಿಪಡಿಸಲಾದ ಪೌಷ್ಟಿಕ ಆಹಾರವನ್ನು ಮೆನ್ಯು ಪ್ರಕಾರ ನೀಡಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಬೇಕೆಂದು ಸಂಬಂಧಿತರಿಗೆ ನಿರ್ದೇಶನ ನೀಡಿದರು.

ನರೇಗಾ ಯೋಜನೆಯಡಿ ಹೆಚ್ಚಿನ ಮಾನವ ದಿನಗಳ ಸೃಜಿಸುವ ಮೂಲಕ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಬೇಕು. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕು. ಜನರ ಬೇಡಿಕೆಗೆ ತಕ್ಕಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಆರಂಭಿಸಬೇಕು. ಕೂಲಿಕಾರರಿಗೆ ಕೆಲಸ ಕೊಡಲು ವಿಳಂಬ ಸಲ್ಲದು ಎಂದು ಸೂಚನೆ ನೀಡಿದರು.

ಪ್ರೊಬೆಷನರಿ ಐಎಎಸ್‌ಅಧಿಕಾರಿ ದಿನೇಶಕುಮಾರ್ ಮೀನಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಪಂಚಾಯತ್ ರಾಜ್‌ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ ಹೂಲಿ, ಸಹಾಯಕ ನಿರ್ದೇಶಕ ಮಹಮ್ಮದಗೌಸ್ ರಿಸಾಲ್ದಾರ್, ಸುರೇಶ ನಾಗೋಜಿ, ತಾಂತ್ರಿಕ ಸಂಯೋಜಕ ವಿನಯಕುಮಾರ ಪಾಟೀಲ್, ಐಇಸಿ ಸಂಯೋಜಕಿ ಎಸ್.ಬಿ.ಜವಳಿ ಪಿಡಿಓ ಈಶ್ವರ ಹಡಪದ, ವಿನಯಕುಮಾರ ಕೊರವಿ ಇತರರಿದ್ದರು.