ಜಿಲ್ಲೆ

ತೆರಿಗೆ ಬಾಕಿ ಉಳಿಸಿಕೊಂಡಿರುವ ಕೈಗಾರಿಕೆಗಳಿಗೆ ನೋಟೀಸ್ ಜಾರಿ ಮಾಡಿ: ಶಿಂಧೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ 1993ರ ಪ್ರಕರಣ 199ರಲ್ಲಿ ನಿರ್ದಿಷ್ಟಪಡಿಸಿರುವ ತೆರಿಗೆ ದರಗಳಂತೆ ಗ್ರಾಮ ಪಂಚಾಯತಿಗಳು ನಿಯಮಾನುಸಾರ 30 ದಿನಗಳೊಳಗಾಗಿ ತಮ್ಮ ವ್ಯಾಪ್ತಿಯ ಕೈಗಾರಿಕೆಗಳ ತೆರಿಗೆ ನಿರ್ಧರಣೆ ಮಾಡಿ, ಸದರಿ ಕೈಗಾರಿಕೆಗಳಿಗೆ ತೆರಿಗೆ ಬೇಡಿಕೆ ನೋಟೀಸಗಳನ್ನು ನೀಡುವಂತೆ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳ ತೆರಿಗೆ ನಿರ್ಧರಣೆ ಮತ್ತು ವಸೂಲಾತಿ ಕುರಿತು ಕೈಗಾರಿಕೆಗಳ ಅಸೋಷಿಯೇಷನವರು ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳ ನಡುವಿನ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆರಿಗೆ ಬೇಡಿಕೆ ನೋಟಿಸಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ 1993 ರ ಪ್ರಕರಣ 201 ಮತ್ತು 202 ರ ಪ್ರಕಾರ ತೆರಿಗೆ ಬೇಡಿಕೆ ಶೇ. 50% ರಷ್ಟು ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಠೇವಣಿ ಮಾಡಿ ಜಿಲ್ಲಾ ಪಂಚಾಯತಿಗೆ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ ಅಂತಾ ಸಭೆಯಲ್ಲಿ ಕೈಗಾರಿಕೆಗಳ ಅಸೋಷಿಯೇಷನ್ರವರುಗಳಿಗೆ ತಿಳಿಸಿದರು. ಸದರಿಯವರು ಇದಕ್ಕೆ ಒಪ್ಪಿಗೆ ಸೂಚಿಸಿದರು ಹಾಗೂ ಕೈಗಾರಿಕೆಗಳ ಮಾಲೀಕರುಗಳಿಗೆ ಇ-ಸ್ವತ್ತು ಮೂಲಕ ನಮೂನೆ-9 ಮತ್ತು 11ಎ ಪೂರೈಸುವಂತೆ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಿಗೆ ತಿಳಿಸಿದರು ಹಾಗೂ 50 ಲಕ್ಷ ಮೇಲ್ಮಟ್ಟ ತೆರಿಗೆ ಸಂಗ್ರಹಣೆ ಮಾಡಿರುವ ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಿ, ಅನುಮೋದನೆ ಪಡೆದುಕೊಳ್ಳುವುದು ಹಾಗೂ ಸದರಿ ಕ್ರಿಯಾ ಯೋಜನೆಗಳಲ್ಲಿ ಕೈಗಾರಿಕೆಗಳ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಉಪ ಕಾರ್ಯದರ್ಶಿ(ಅಭಿವೃಧ್ಧಿ) ಬಸವರಾಜ ಅಡವಿಮಠ ಜಿಲ್ಲಾ ಪಂಚಾಯತ ಬೆಳಗಾವಿ, ಜಂಟಿ ನಿರ್ದೇಶಕರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸತ್ಯನಾರಾಯಣ ಭಟ್ಟ, ಜಿಲ್ಲೆಯ ಸಂಬಂಧಿಸಿದ ಕೈಗಾರಿಕೆಗಳ ಅಸೋಷಿಯೇಷನ್ರವರುಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಬೆಳಗಾವಿ, ಸಹಾಯಕ ನಿರ್ದೇಶಕರು(ಪಂ.ರಾಜ್) ತಾಲೂಕ ಪಂಚಾಯತ ಬೆಳಗಾವಿ ಹಾಗೂ ಹುಕ್ಕೇರಿ ಬೆಳಗಾವಿ ತಾಲೂಕಿನ ಹೊನಗಾ, ಕಾಕತಿ, ಕಿಣಯೇ, ವಾಘವಡೆ, ದೇಸೂರ, ಸಂತಿ ಬಸ್ತವಾಡ, ಕಂಗ್ರಾಳಿ ಬಿ.ಕೆ ಹಾಗೂ ಹುಕ್ಕೇರಿ ತಾಲೂಕಿನ ಕಣಗಲಾ ಹಾಗೂ ಹತ್ತರಗಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು ಭಾಗವಹಿಸಿದರು.