ಒಂದು ದಿನದ ಸಿಇಒಗಳಾದ ಶಾಹೀನ್, ಹನುಮಮ್ಮ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಗುರುವಾರ ಕಾಣಿಸಿಕೊಂಡರು. ಡಿಸಿ ಎಂ.ಸುಂದರೇಶ ಬಾಬು, ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ ಇದ್ದರು.  
ಜಿಲ್ಲೆ

ಸಿಇಒ ಆಗಿ ಕೆಲಸ ಮಾಡಿದ ವಿದ್ಯಾರ್ಥಿನಿಯರು: ಮಹಿಳಾ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಪಂ ವಿಶೇಷ ಯೋಜನೆ

ಕೊಪ್ಪಳ: ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಯೋಜಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ವಿದ್ಯಾರ್ಥಿನಿಯರಿಗೆ ಒಂದು ದಿನದ ಮಟ್ಟಿಗೆ ಸಿಇಒ ಆಗಿ ಕಾರ್ಯನಿರ್ವಹಿಸಲು ಗುರುವಾರ ಅವಕಾಶ ಮಾಡಿಕೊಟ್ಟಿತ್ತು.


ಐಎಎಸ್, ಐಪಿಎಸ್ ಅಕಾರಿಗಳಾಗಬೇಕೆಂಬುದು ಬಹುತೇಕ ವಿದ್ಯಾರ್ಥಿಗಳ ಕನಸು. ಆದರೆ, ಆಡಳಿತ ಅನುಭವ ಹೇಗಿರುತ್ತದೆ ? ಜನರೊಂದಿಗೆ ವ್ಯವಹರಿಸುವುದು, ಅಹವಾಲು ಸ್ವೀಕಾರ, ಪರಿಹಾರ ನೀಡುವುದು, ಅಧಿಕಾರಿಗಳೊಂದಿಗೆ ಸಂವಹನ ನಡೆಸುವಿಕೆ, ಮಾಧ್ಯಮದವರೊಂದಿಗಿನ ಒಡನಾಟ, ಕಚೇರಿ ಕಡತ ನಿರ್ವಹಣೆ, ಸಭೆ ನಡೆಸುವಿಕೆ ಮುಂತಾದ ಪ್ರಾಯೋಗಿಕ ಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂಬುದು ಜಿಪಂ ಮುಖ್ಯ ಉದ್ದೇಶ.


ಗವಿಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿನಿಯರಾದ ಶಾಹೀನ್, ಹನುಮಮ್ಮ ಇಬ್ಬರು ಒಂದು ದಿನದ ಸಿಇಒ ಆಗಿದ್ದವರು. ಗುರುವಾರ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರೊಂದಿಗೆ ಹಿರೇಸಿಂದೋಗಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ ಕಾರ್ಯಕ್ರಮ, ಡಿಸಿಯವರೊಂದಿಗೆ ರಜತ ಮಹೋತ್ಸವ ವೇದಿಕೆಯ ಸಿದ್ಧ್ದತೆ ಪರಿಶೀಲನೆ, ಉದ್ಯೋಗ ಮೇಳಕ್ಕೆ ಚಾಲನೆ ಸೇರಿದಂತೆ ಇಡೀ ದಿನದ ಕಾರ್ಯಕ್ರಮದಲ್ಲಿ ಒಂದು ದಿನದ ಸಿಇಒಗಳಾಗಿ ವಿದ್ಯಾರ್ಥಿಗಳಿಬ್ಬರು ಲವಲವಿಕೆಯಿಂದ ಕಾರ್ಯ ನಿರ್ವಹಿಸಿ ಆಡಳಿತದ ಅನುಭವ ಪಡೆದು ಸಂಭ್ರಮಿಸಿದರು.