ಮುಧೋಳ ತಾಲ್ಲೂಕಿನ ಬುದ್ನಿ ಪಿ.ಎಂ. ಗ್ರಾಮದಲ್ಲಿ ಶಾಲೆಗೆ ಕೂಡಲೇ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು. ನಾಗರಾಜ ಪೂಜಾರಿ, ರಾಜುಗೌಡ ದೊಡಮನಿ, ಉದಯ ಬಡಕಲಿ, ನಿಂಗಯ್ಯ ಮರೇಗುದ್ದಿ, ವೆಂಕಣ್ಣ ವಡ್ಡರ, ವಿಶ್ವನಾಥ ಗೊಡಚಿ, ಜಗದೀಶ ಮರೇಗುದ್ದಿ, ರೇವಣಸಿದ್ದಯ್ಯ ಮರೇಗುದ್ದಿ ಇದ್ದಾರೆ.  
ಜಿಲ್ಲೆ

ಶತಮಾನದ ಶಾಲೆಗೆ ಕಾಡುತ್ತಿದೆ ಮೂಲಸೌಕರ್ಯ ಸಮಸ್ಯೆ

ವಿನಯ ಆಶೋಕ ನಾಯ್ಕ

ಮುಧೋಳ: ಶತಮಾನಗಳಿಂದ ಶಿಕ್ಷಣ ನೀಡುತ್ತಿರುವ ಬುದ್ನಿ ಪಿ.ಎಂ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಪ್ರತಿನಿತ್ಯ ಹತ್ತಾರು ಅನಾನುಕೂಲತೆ ನಡುವೆಯೇ ಶಿಕ್ಷಣ ಪಡೆಯುವಂತಾಗಿದೆ. ಆದ್ದರಿಂದ ಶಾಲೆಗೆ ಕೂಡಲೇ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಶಾಲೆಯ ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು.

ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಹತ್ತಾರು ಬಾರಿ ಮನವಿ ನೀಡಿದರೂ ಗ್ರಾಮ ಪಂಚಾಯತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಮೂಲಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಶಾಲೆ ಮಕ್ಕಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಶಾಲೆಗೆ ವರ್ಷದ ಹಿಂದೆಯೇ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದಿಂದ ಅದಕ್ಕೊಂದು ಸೂರು ಕಲ್ಪಿಸದ ಕಾರಣ ಯಂತ್ರವು ಧೂಳು ಹಿಡಿದಿದೆ.

ಶಾಲಾ ಆವರಣದಲ್ಲಿ ಅಡುಗೆ ಮಾಡಿದ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ನೀರು ಶಾಲೆ ಹಿಂಬದಿಯಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕೂಡಲೇ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಒಂದುವರೆ ವರ್ಷದ ಹಿಂದೆ ಬ್ರಿಕ್ಸ್ ತರಿಸಿದ್ದರು, ಅಳವಡಿಸಿದ ಕಾರಣ ಮಕ್ಕಳು ಮಣ್ಣಿನಲ್ಲಿ ಕುಳಿತುಕೊಳ್ಳುವಂತಾಗಿದೆ. ಅವುಗಳ ಅಳವಡಿಕೆಗೆ ಮುಂದಾಗಬೇಕು. ಶೌಚಾಲಯದಲ್ಲಿ ನೀರಿನ ಸಮಸ್ಯೆ ಇದ್ದು ನೀರು ಒದಗಿಸಬೇಕು ಎಂದು ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಪೂಜಾರಿ, ರಾಜುಗೌಡ ದೊಡಮನಿ, ಉದಯ ಬಡಕಲಿ, ನಿಂಗಯ್ಯ ಮರೇಗುದ್ದಿ, ವೆಂಕಣ್ಣ ವಡ್ಡರ, ವಿಶ್ವನಾಥ ಗೊಡಚಿ, ಜಗದೀಶ ಮರೇಗುದ್ದಿ, ರೇವಣಸಿದ್ದಯ್ಯ ಮರೇಗುದ್ದಿ, ತಿಮ್ಮಣ್ಣ ಇಕ್ಕಲಿ, ರಾಜೇಶ್ವರಿ ಬಡಕಲಿ, ಅಕ್ಷತಾ ನಾಯ್ಕ ಇತರರಿದ್ದರು.

ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಎಸ್‌ಡಿಎಂಸಿ ಸದಸ್ಯರು ಒತ್ತಾಯಿಸುತ್ತಿದ್ದು, ಅವರ ಬೇಡಿಕೆಗನುಗುಣವಾಗಿ ಈಗಾಗಲೇ ಕಾರ್ಯಾರಂಭ ಮಾಡಿದ್ದೇವೆ. ತಿಂಗಳೊಳಗೆ ಶಾಲೆಗೆ ಸೂಕ್ತ ಸೌಕರ್ಯ ಒದಗಿಸುತ್ತೇವೆ. ರಾಜು ತಿಮಸಾನಿ, ಗ್ರಾಮ ಪಂಚಾಯತ ಉಪಾಧ್ಯಕ್ಷ