ಶಿರಸಿಯಲ್ಲಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಮಾತನಾಡಿದರು. ಮೋಹನದಾಸ ನಾಯಕ, ಎಲ್.ಟಿ. ಪಾಟೀಲ, ಪ್ರಕಾಶ ಗುನಗಿ, ಗಜಾನನ ಪೈ, ಶ್ರೀಕಾಂತ ಭಟ್ ಇತರರಿದ್ದರು. 
ಜಿಲ್ಲೆ

ಶತಮಾನದ ಬ್ಯಾಂಕ್‌ಗೆ ರೂ. 25.11 ಕೋಟಿ ಲಾಭ

 ಶಿರಸಿ: ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮಾತೃ ಸಂಸ್ಥೆ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಪ್ರಸಕ್ತ ಸಾಲಿನಲ್ಲಿ 25.11 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ. ಪ್ರಸಕ್ತ ಆಡಳಿತ ಮಂಡಳಿ ಕಳೆದ ಐದು ವರ್ಷಗಳ ಹಿಂದೆ ಆಡಳಿತ ವಹಿಸಿಕೊಳ್ಳುವ ವೇಳೆ ಈ ಲಾಭ 7.72 ಕೋಟಿ ರೂ. ಇದ್ದುದು ಈಗ ಗಣನೀಯವಾಗಿ ಏರಿಕೆಯಾದಂತಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಬ್ಯಾಂಕಿನ ವಹಿವಾಟಿನ ವಿವರ ನೀಡಿದರು.

1920ರಲ್ಲಿ ಸ್ಥಾಪನೆಯಾಗಿರುವ ಕೆಡಿಸಿಸಿ ಈಗ 105 ವರ್ಷಗಳ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದೆ. ರೈತರ, ಸಾರ್ವಜನಿಕರ ಸೇವೆ ಒದಗಿಸುತ್ತ, ಪ್ರತಿ ವರ್ಷವೂ ಲಾಭ ಗಳಿಸುತ್ತಿರುವುದು ವಿಶೇಷ. ಬ್ಯಾಂಕ್‌ನ ಶೇರು ಬಂಡವಾಳ 145 ಕೋಟಿ ರೂ.ಗೆ, ನಿಧಿಗಳು 351 ಕೋಟಿ ರೂ. ಗೆ ಹಾಗೂ ಠೇವುಗಳು 3569 ಕೋಟಿ ರೂ.ಗೆ ಏರಿಕೆ ಆಗಿದೆ. ಸಾಲ ಬಾಕಿ 3280 ಕೋಟಿ ರೂ. ಹಾಗೂ ದುಡಿಯುವ ಬಂಡವಾಳ 4929 ಕೋಟಿ ರೂ. ಗೆ ಏರಿದೆ. ಬ್ಯಾಂಕ್‌ನ ಒಟ್ಟು ಆದಾಯ 375 ಕೋಟಿ ರೂ.ಗೆ ಏರಿದೆ ಎಂದರು.

ಅನುತ್ಪಾದಕ ಆಸ್ತಿಯು ಬ್ಯಾಂಕ್ ಇತಿಹಾಸದಲ್ಲಿಯೇ ಈಗ ಅತ್ಯಂತ ಕಡಿಮೆ ಆಗಿದೆ. 2020ರಲ್ಲಿ 8.55ರಷ್ಟಿದ್ದ ಅನುತ್ಪಾದಕ ಆಸ್ತಿ ಈಗ 0.94ಕ್ಕೆ ಕುಸಿದಿದೆ. ಈ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬಹುದಿತ್ತಾದರೂ ರೈತರ ಹಿತ ರಕ್ಷಣೆಯ ದೃಷ್ಠಿಯಿಂದ ನಾವು ಕಾರ್ಯ ನಿರ್ವಹಿಸಿದ್ದೇವೆ ಎಂದರು.

ರಾಜ್ಯದ ಬೇರೆ ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ಇಲ್ಲದ ಸೌಲಭ್ಯವನ್ನು ನಾವು ನಮ್ಮ ರೈತರಿಗೆ ನೀಡಿದ್ದೇವೆ. ಜಿಲ್ಲೆಯ 85 ಸಾವಿರ ರೈತರಿಗೆ 1010 ಕೋಟಿ ರೂ. ಬೆಳೆ ಸಾಲ, ಮಾಧ್ಯಮಿಕ ಸಾಲ ವಿತರಿಸಿದ್ದೇವೆ. ವ್ಯವಸಾಯದ ಸಾಲ ಮರುಪಾವತಿ ಪ್ರಮಾಣ ಶೇ. 98.8ರಷ್ಟಿದೆ. ಆದರೆ, ಬ್ಯಾಂಕ್ ಆರ್ಥಿಕವಾಗಿ ಸಬಲವಾಗಬೇಕೆಂದರೆ ಉದ್ಯಮಗಳಿಗೂ ಸಾಲ ನೀಡಬೇಕಾಗುತ್ತದೆ ಎಂದರು.

ಸರ್ಕಾರದ ವಿವಿಧ ಸೌಲಭ್ಯಗಳನ್ನು ಜನತೆಗೆ ತಲುಪಿಸುವುದು ನಮ್ಮ ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ರೈತರ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ ಯೋಜನೆಯ ಪ್ರಿಮಿಯಂ 1.63 ಕೋಟಿ ರೂ.ಗಳನ್ನು ರೈತರಿಂದ ಸಂಗ್ರಹಿಸಿ ಯಶಸ್ವಿನಿ ಟ್ರಸ್ಟ್ ಗೆ ವರ್ಗಾಯಿಸಿದ್ದೇವೆ. ಪ್ರದಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 51,799 ಎಕರೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 49,665 ಎಕರೆ ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸಿದ್ದೇವೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 41.04 ಕೋಟಿ ರೂ., ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ 81.59 ಕೋಟಿ ರೂ. ಪರಿಹಾರದ ರಖಂ ಮಂಜೂರಾಗಿದೆ. ಅತ್ಯಾಧುನಿಕ ಸೇವೆಗಳಾದ ನೆಫ್ಟ್, ಯುಪಿಐ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಬ್ಯಾಂಕ್ ಈಗ ಒದಗಿಸುತ್ತಿವೆ ಎಂದರು.

ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಎಲ್.ಟಿ. ಪಾಟೀಲ, ಪ್ರಕಾಶ ಗುನಗಿ, ತಿಮ್ಮಯ್ಯ ಹೆಗಡೆ, ಜಿ.ಆರ್. ಹೆಗಡೆ ಸೋಂದಾ, ಪ್ರಮೋದ ಧವಳೆ, ಗಜಾನನ ಪೈ, ರಾಮಕೃಷ್ಣ ಹೆಗಡೆ, ವ್ಯವಸ್ಥಾಪಕ ಶ್ರೀಕಾಂತ ಭಟ್ ಇತರರಿದ್ದರು.

ರಾಜ್ಯದ 69 ಸಕ್ಕರೆ ಕಾರ್ಖಾನೆಗಳಲ್ಲಿ 54ರಷ್ಟು ಕಾರ್ಖಾನೆಗಳು ಸಹಕಾರಿ ಸಂಘಗಳಿಂದಲೇ ಸಾಲ ಪಡೆದುಕೊಂಡಿವೆ. ಶೇ. 13ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಕೆಡಿಸಿಸಿ ಬ್ಯಾಂಕ್ ಸಹ ಸಕ್ಕರೆ ಕಾರ್ಖಾನೆಗಳಿಗೆ ಸಾಲ ವಿತರಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳ ಸಾಲ ಕಟ್ ಬಾಕಿ ಆಗಿಲ್ಲ. ಕಬ್ಬು ಬೆಳೆಗಾರರಿಗೂ ಬಲ ತುಂಬಿವೆ. ಶಿವರಾಮ ಹೆಬ್ಬಾರ್, ಅಧ್ಯಕ್ಷರು, ಕೆಡಿಸಿಸಿ ಬ್ಯಾಂಕ್