ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಂಥಾಲಯಗಳು ಜ್ಞಾನಭಂಡಾರವಿದ್ದಂತೆ, ಅರಿವು ಕೇಂದ್ರಗಳು ಓದುಗರ ಸ್ನೇಹಿಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧಾ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಜ್ಞಾನಾರ್ಜನೆಗೆ ಗ್ರಂಥಾಲಯ ಅವಶ್ಯಕವಾಗಿದೆ. ಇತಿಹಾಸ, ಕಲೆ,ವಿಜ್ಞಾನ, ಪ್ರಯೋಗ, ಹೊಸ ಹೊಸ ತಂತ್ರಜ್ಞಾನ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ನೂರು ಪುಸ್ತಕಗಳಿರುವ ಕಿಟ್ ಮತ್ತು ದೃಷ್ಟಿ ಸವಾಲಿರುವವರಿಗೆ ಹೆಚ್ಚು ಉಪಯುಕ್ತವಾಗುವ ಅಲೆಕ್ಸಾವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ನಿರ್ವಹಣೆಯೂ ಮುಖ್ಯ: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಮಯಕ್ಕೆ ಸರಿಯಾಗಿ ಗ್ರಂಥಾಲಯ ತೆರೆಯಬೇಕು. ಗ್ರಂಥಾಲಯದಲ್ಲಿ ಅಚ್ಚುಕಟ್ಟಾಗಿ ಪುಸ್ತಕಗಳ ಜೋಡಣೆ, ಸ್ವಚ್ಛತೆ ಕಾಪಾಡಬೇಕು, ಸರ್ಕಾರದಿಂದ ಬರುವ ಎಲ್ಲ ಪುಸಕಗಳನ್ನು ಆಯಾ ಪಂಚಾಯಿತಿಯ ಪಿಡಿಒಗಳ ಬಳಿ ಗ್ರಂಥಾಲಯದ ಮೇಲ್ವಿಚಾರಕರು ಅಥವಾ ಪಾಲಕರು ನೋಂದಾಯಿಸಿಕೊಂಡು ಪಡೆದುಕೊಳ್ಳಬೇಕು. ಮಕ್ಕಳಿಗೆ ಓದುಗರಿಗೆ ಉತ್ತಮ ರೀತಿ ಓದಲು ಪುಸ್ತಕ ನೀಡಬೇಕು ಎಂದು ಸಿಇಒ ತಿಳಿಸಿದರು.
ಸಾಧನಗಳ ವಿತರಣೆ: ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿಎಸ್‌ಆರ್ ಅನುದಾನದಡಿ ಕ್ಯಾಟರ್ಪಿಲ್ಲರ್ ಸಂಸ್ಥೆ ವತಿಯಿಂದ ಅರಿವು ಕೇಂದ್ರಗಳಿಗೆ ಬುಕ್ಸ್‌ಕಿಟ್ ವಿತರಣೆ ಮತ್ತು ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ ಅದಕ್ಕಾಗಿ ಅಲೆಕ್ಸಾ ಸಾಧನ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಜಯಲಕ್ಷ್ಮಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ಪುಸ್ತಕಗಳ ಜೋಡಣೆ, ಮಕ್ಕಳ ಆಸಕ್ತಿ ತಿಳಿದು ಅವರಿಗೆ ಬೇಕಾದ ಪುಸ್ತಕ ವಿತರಣೆ, ಕಲಿಕೆ ಆಕರ್ಷಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಕಾರ್ಯಗಾರವನ್ನು ನಡೆಸಿದರು.