ಎನ್.ಮುನಿವೆಂಕಟೇಗೌಡ ಕೋಲಾರ: ಕೋಲಾರ ನಗರದ ಹೊರವರ್ತುಲ ರಸ್ತೆ ನಿರ್ಮಾಣದ ಕನಸಿಗೆ ಕೇಂದ್ರ ಸರ್ಕಾರ ಬಿಕ್ ಶಾಕ್ ನೀಡಿದೆ.
ಕೋಲಾರ ನಗರದಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡಲು ಹೊರ ವರ್ತುಲ ರಸ್ತೆ ನಿರ್ಮಿಸಲು 20 ವರ್ಷಗಳ ಹಿಂದೆ ಕ್ರಿಯಾಯೋಜನೆ ತಯಾರಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಳೇ ಯೋಜನೆ ಕೈ ಬಿಟ್ಟು ಹೊಸದಾದ ಕ್ರಿಯಾಯೋಜನೆ ತಯಾರು ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ನಗರಾಭಿವೃದ್ಧಿ ಇಲಾಖೆಗೆ 250 ಕೋಟಿ ರೂ. ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ನಗರಾಭಿವೃದ್ಧಿ ಸಚಿವರೂ ಆದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಇಲಾಖೆಗೆ ಬಿಡುಗಡೆಯಾಗಿದ್ದ ಹಣದಲ್ಲಿ 100 ಕೋಟಿ ರೂ.ಗಳನ್ನು ಕೋಲಾರದ ನೂತನ ರಿಂಗ್ ರೋಡ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು.
ಯೋಜನೆ ಡಿಪಿಆರ್ ಆಗಿ ಹೊಸ ಸರ್ವೇ ಕಾರ್ಯ ಮುಗಿಸಿದ್ದ ಅಧಿಕಾರಿಗಳು ಇನ್ನೇನು ಕ್ಯಾಬಿನೆಟ್ ಅನುಮತಿ ಪಡೆದು ಟೆಂಡರ್ ಹಾಗೂ ಭೂಸ್ವಾಧಿನ ಪ್ರಕ್ರಿಯೆ ಶುರು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಈ ಹಂತದಲ್ಲಿ ಕೇಂದ್ರ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ಬಿಡುಗಡೆ ಮಾಡಿದ್ದ 250 ಕೋಟಿ ರೂ.ಗಳನ್ನು ವಾಪಸ್ ಪಡೆದುಕೊಂಡಿದೆ.
ಇದರಿಂದ ಈಗಾಗಲೇ ಆ ಹಣದಲ್ಲಿ ಹಲವು ಯೋಜನೆಗಳನ್ನು ಪ್ಲ್ಯಾನ್ ಮಾಡಿದ್ದ ಸಚಿವ ಬೈರತಿ ಸುರೇಶ್ ಈಗ ರಾಜ್ಯದ ಅನುದಾನದಲ್ಲೇ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ಮಾಡುವುದಾಗಿ ಹೇಳಿದ್ದಾರೆ.
ಅನುದಾನ ನೀಡಲಿ
ಕೋಲಾರ ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ 25 ವರ್ಷ ಗಮನದಲ್ಲಿಟ್ಟುಕೊಂಡು ಸುಮಾರು 30 ಕಿಮೀ ರಸ್ತೆ ನಿರ್ಮಾಣಕ್ಕೆ ಹೊಸ ಯೋಜನೆ ರೂಪಿಸಲಾಗಿತ್ತು. ಅದರಂತೆ ಕೋಲಾರ ನಗರದಿಂದ 9 ಕಿಮೀ ದೂರದ ರಾಷ್ಟ್ರೀಯ ಹೆದ್ದಾರಿ&75ರ ಬೆಂಗಳೂರು ರಸ್ತೆ ನಾಗಲಾಪುರದಿಂದ ಆರಂಭವಾಗಿ ಚಿಕ್ಕಬಳ್ಳಾಪುರ ಮುಖ್ಯರಸ್ತೆ, ಚಿಂತಾಮಣಿ ಮುಖ್ಯರಸ್ತೆ, ಶ್ರೀನಿವಾಸಪುರ ಮುಖ್ಯ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ&75ರ ಮತ್ತೊಂದು ಭಾಗದ ಮುಳಬಾಗಲಿಗೆ ತಲುಪುವ ಮೂಲಕ ಇಡೀ ನಗರ ಹಾಗೂ ಹೆದ್ದಾರಿಗೆ ಸಂಪರ್ಕ ಕಲ್ಪಿಸಿ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಜತೆಗೆ ನಗರವನ್ನು ವಿಸ್ತರಣೆ ಮಾಡುವುದು ಯೋಜನೆ ಉದ್ದೇಶವಾಗಿದೆ. ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಒತ್ತಾಯಿಸಿದರು.
"ಕಳೆದ 2 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೋಲಾರ ರಿಂಗ್ ರೋಡ್ ಕೆಲಸ ಚುರುಕು ಪಡೆದುಕೊಂಡಿತ್ತು, ಆದರೆ ಕೇಂದ್ರ ಸರ್ಕಾರ ಹಣ ವಾಪಸ್ ಪಡೆಯುವ ಮೂಲಕ ಮಹತ್ವದ ಯೋಜನೆ ಮತ್ತೆ ಹಳ್ಳಹಿಡಿಯುವಂತಾಗಿದೆ. ಕೂಡಲೇ ಕೇಂದ್ರ ಹಣ ಬಿಡುಗಡೆ ಮಾಡಿ ಯೋಜನೆ ಮುಂದುವರಿಸಲು ಸಹಕರಿಸಬೇಕು."
> ಕೊತ್ತೂರು ಮಂಜುನಾಥ್, ಶಾಸಕ