ಜಿಲ್ಲೆ

ಕಾಲಿನ ಗಾಯ ಕೆರಕೊಂಡು ಉಣ್ಣು ಮಾಡಿಕೊಂಡಿರುವ ಸಿದ್ದರಾಮಯ್ಯ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ಕಾಂಗ್ರೆಸ್​ ಪಕ್ಷದಲ್ಲೇ ಸಾಕಷ್ಟು ಗೊಂದಲವಿದೆ. ಸಿಎಂ ಸಿದ್ದರಾಮಯ್ಯ ಕಾಲಿಗೆ ಗಾಯಮಾಡಿಕೊಂಡಿದ್ದು ಆ ಗಾಯ ಕೆರಕೊಂಡು ಮೈಯೆಲ್ಲಾ ಉಣ್ಣಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ಧಾಳಿ ನಡೆಸಿದರು.

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಆಯುಧಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ನಮ ಪಕ್ಷಕ್ಕಿಂತ ಕಾಂಗ್ರೆಸ್​ನಲ್ಲೇ ಜಾಸ್ತಿ ಶತ್ರುಗಳಿದ್ದಾರೆ. ಜಾತಿಗಣತಿ ವರದಿ ಅವೈಜ್ಞಾನಿಕ ಎಂದು ನಾವು ಹೇಳುತ್ತಿಲ್ಲ. ಅವರ ಪಕ್ಷದವರೇ ಹೇಳುತ್ತಿದ್ದು ಇದರಲ್ಲಿ ಪ್ರತಿಷ್ಠೆ ತೋರುವ ಅಗತ್ಯವಿಲ್ಲ ಎಂದರು.

ಜಾತಿಗಣತಿ ವರದಿ ಸಿದ್ಧಪಡಿಸಿ ವರ್ಷಗಳೇ ಆಗಿದ್ದು ಅಂದೇ ಅನುಷ್ಠಾನ ಗೊಳಿಸಬೇಕಿತ್ತು. ಈಗ ಅವರ ಪಕ್ಷದಲ್ಲೇ ಸಾಕಷ್ಟು ಗೊಂದಲ, ವಿರೋಧ ವ್ಯಕ್ತವಾಗುತ್ತಿದ್ದು ಅದನ್ನು ಮರೆಮಾಚಲು ಏನೆಲ್ಲಾ ಹರಸಾಹಸ ಮಾಡುತ್ತಿದ್ದಾರೆ. ಬುಟ್ಟಿಯಲ್ಲಿ ಹಲ್ಲಿಲ್ಲದ ಹಾವು ಇಟ್ಟುಕೊಂಡು ಕಚ್ಚುತ್ತೆ ಅಂತಿದ್ದು ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಆಗ ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ ವೈಜ್ಞಾನಿಕವಾಗಿ ಜಾತಿ ಗಣತಿ ಮಾಡಿಸುವಂತೆ ಬುದ್ದೀಜಿವಿಗಳ ಸಹ ಸಲಹೆ ಕೊಟ್ಟಿದ್ದಾರೆ. ಅದನ್ನು ಪುನರ್​ ಪರಿಶೀಲನೆ ಮಾಡಿದರೆ ದೇಶ ಏನು ಮುಳುಗಿ ಹೋಗುವುದಿಲ್ಲ. ಶಾಸಕ ಶ್ರೀನಿವಾಸ್​ ಸಹ ವಿರೋಧ ವ್ಯಕ್ತಪಡಿಸಿದ್ದು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇಡಬಾರದು. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು ಎಂದು ಟಾಂಗ್​ ಕೊಟ್ಟರು.

ನನ್ನ ಕಲ್ಪನೆಯ ದಕ್ಷಿಣಭಾರತವನ್ನು ನಿರ್ಮಾಣ ಮಾಡಬೇಕೆಂಬುದು ಪ್ರಧಾನಿ ಮೋದಿ ಅವರ ಬಯಕೆ. ಈ ನಿಟ್ಟಿನಲ್ಲಿ ನನಗೆ ಕೆಲವು ನಿರ್ದೇಶನ ನೀಡಿದ್ದು ಕನಿಷ್ಟ 50 ಲೋಕಸಭಾ ಕ್ಷೇತ್ರದಲ್ಲಿ ದೊಡ್ಡ ತಂಡದೊಂದಿಗೆ ಕೆಲಸ ಮಾಡಿ ಬಡವರು, ಧ್ವನಿ ಇಲ್ಲದವರನ್ನು ಗುರುತಿಸಿ ಯಾವ ಜಾತಿ ಕುಲ ಅನ್ನದೆ ಸವಲತ್ತು ನೀಡುವಂತೆ ತಿಳಿಸಿದ್ದಾರೆ ಎಂದು ಸೋಮಣ್ಣ ಹೇಳಿದರು.

ರಾಯಚೂರು, ಮಧುಗಿರಿ ಅಭಿವೃದ್ಧಿಯ ಜವಾಬ್ದಾರಿ ಕೊಟ್ಟಿದ್ದು ಆ ಬಗ್ಗೆ ಮಾಹಿತಿ ನೀಡಲು ಹೋದಾಗ ನನಗು ಎಲ್ಲಾ ಗೊತ್ತಿದೆ. ನನ್ನ ಬಳಿ ಮಾಹಿತಿ ಇದ್ದು ಮುಂದೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಆ ಬಗ್ಗೆ ಗಮನಹರಿಸಿ (ಹಮ್​ ಸಬ್​ ಕೊ ಮಾಲೂಮ್​ ಹೈ, ಮೆರಾ ಪಾಸ್​ ಬೀ ಪಾಸ ಬಿ ಹೇ, ಆಪ್​ ಬಾಕೀ ಕಾಮ್​ ಕಾ ಚಿಂತಾ ಕೀಜಿಯೇ) ಎಂದಾಗ ನನಗೆ ನಿಜಕ್ಕು ಅಚ್ಚರಿಯಾಯಿತು ಎಂದರು.

ಪ್ರಧಾನಿ ಮೋದಿ ಸದಾ ಅಭಿವೃದ್ಧಿ ಬಗ್ಗೆಯೇ ಚಿಂತನೆ ಮಾಡುತ್ತಾರೆ. ಯಾರನ್ನು ದ್ವೇಷಿಸುವುದಿಲ್ಲ. 1996ರಿಂದ ರೈಲ್ವೆ ಇಲಾಖೆಯಲ್ಲಿ ಕೆಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದು ಅವುಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ 43 ಸಾವಿರ ಕೋಟಿ ರೂ., ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಈ ದೇಶ ಕಂಡ ಒಬ್ಬ ಅಪ್ರತಿಮ ಉದ್ಯಮಿ ರತನ್​ ಟಾಟಾ. ಕೈಗಾರಿಕೋದ್ಯಮಿಯಾಗಿ ಬೇರೆ ದೇಶಗಳ ಜೊತೆಗೆ ಸೆಣಸಾಟಮಾಡಿ, ದೇಶದ ಕೀರ್ತಿ ಪತಾಕೆ ಹಾರಿಸಿರುವಲ್ಲಿ ರತನ್​ ಟಾಟಾ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅವರ ಇಡೀ ಆಸ್ತಿಯನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಇದು ಸೂರ್ಯಚಂದ್ರ ಇರುವ ತನಕ ಉಳಿಯಲಿದೆ. ವಿ.ಸೋಮಣ್ಣ ಕೇಂದ್ರ ಸಚಿವ