ಜಿಲ್ಲೆ

ರಾಜ್ಯದಲ್ಲಿರುವುದು ಗೋಲ್​ ಮಾಲ್​ ಸರ್ಕಾರ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ತುಮಕೂರು: ರಾಜ್ಯದಲ್ಲಿ ಗೋಲ್​ಮಾಲ್​ ಸರ್ಕಾರ ಆಡಳಿತ ನಡೆಸುತ್ತಿದ್ದು ಪ್ರತಿದಿನ ಒಂದೊಂದು ಇಲಾಖೆಗಳ ಹಗರಣ ಹೊರಬರುತ್ತಿದೆ. ಬಡವರ ಹಣವನ್ನು ಚುನಾವಣೆಗೆ ಬಳಸುತ್ತಿರುವುದು ಬಯಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹರಿಹಾಯ್ದರು.

ಶನಿವಾರ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಚಿವರು, ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದು, ಈಗ ಪರಿಹಾರ ಕೇಳುತ್ತಿದ್ದಾರೆ. ಸಂವಿಧಾನಾತ್ಮಕ ಅಧಿಕಾರದ ಸ್ಥಾನದಲ್ಲಿದ್ದಾಗಲೇ ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಎಸ್​ಐಟಿ ತನಿಖೆ ಹೆಸರಿನಲ್ಲಿ ಮೂಡಾ ಹಗರಣ ಮುಚ್ಚಿಯಾಕುವ ಹುನ್ನಾರ ನಡೆದಿದೆ ಹಾಗಾಗಿ, ಈ ಹಗರಣವನ್ನು ಸಿಬಿಐಗೆ ವಹಿಸಬೇಕು. ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಕಚ್ಛಾ ವಸ್ತುಗಳನ್ನು ಬಳಸಿಕೊಂಡು ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಆರಂಭಿಸಿ, ಅಂತರಾಷ್ಟ್ರೀಯ ಗುಣ ಮಟ್ಟದ ಪದಾರ್ಥಗಳನ್ನು ಉತ್ಪಾದನೆ ಮಾಡಿ ಮಾರುಕಟ್ಟೆ ಮಾಡುವ ಕಾರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಗತ್ಯ ಎಲ್ಲಾ ನೆರವು ನೀಡುತ್ತಿದೆ ಎಂದರು.

ಯುವಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ದೇಶದಲ್ಲಿ ಸುಮಾರು 20 ಕೋಟಿ ಜನರು ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇಂತಹ ಕೈಗಾರಿಕೆಗಳನ್ನು ಆರಂಭಿಸಿ ಉದ್ಯೋಗ ನೀಡುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅಗತ್ಯ ಸಾಲ, ಸಬ್ಸಿಡಿ ಸೌಲಭ್ಯ ನೀಡುತ್ತದೆ ಎಂದರು.

ಉದ್ಯೋಗ ನೀಡುವ ದೃಷ್ಟಿಯಲ್ಲಿ ಹೊರ ದೇಶಗಳ ಕಂಪನಿಗಳು ಕೈಗಾರಿಕೆ ಸ್ಥಾಪನೆ ಮಾಡಲು ನಮ್ಮಲ್ಲಿಗೆ ಬರುತ್ತಿವೆ. ಇಂತಹ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ನಮ್ಮ ಯುವಜನರನ್ನು ತಾಂತ್ರಿಕ ಕೌಶಲದೊಂದಿಗೆ ಸಜ್ಜುಗೊಳಿಸಬೇಕಾಗಿದೆ. ಅಂತಹ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶಗೌಡ ಮತ್ತಿತರರು ಮುಖಂಡರು ಇದ್ದರು.