ಹುಬ್ಬಳ್ಳಿ: ವಾಲ್ಮೀಕಿ, ಮುಡಾ ಹಗರಣಗಳ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯಾಂತರ ಮಾಡುವ ಸಲುವಾಗಿ ರಾಜ್ಯ ಸರ್ಕಾರ ದರ್ಶನ್ ಕೇಸ್ ಗೆ ಸಂಬಂಧಪಟ್ಟ ಕೆಲವು ಫೋಟೋಗಳನ್ನು ವೈರಲ್ ಮಾಡುವ ಸಂಕುಚಿತ ಷ್ಯಡ್ಯಂತ್ರ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಹತ್ಯೆ ರಾಜ್ಯ ಕಂಡ ಅತ್ಯಂತ ಕ್ರೂರ ಕೃತ್ಯವಾಗಿದೆ. ಕೊಲೆಗಾರರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯ ಸರ್ಕಾರ ತಾನು ಮಾಡಿದ ಪ್ರಮಾದಗಳನ್ನು ಮುಚ್ಚಿಕೊಳ್ಳಲು ಇದನ್ನು ಬಳಸುತ್ತಿರುವುದು ಅಕ್ಷಮ್ಯ ಅಪರಾಧ. ಈ ಹಿಂದೆ ಬೆಂಗಳೂರು ಜೈಲಿನಲ್ಲಿದ್ದ ದರ್ಶನ್ ಫೋಟೋಗಳನ್ನು ವೈರಲ್ ಮಾಡಲಾಗಿತ್ತು. ಇದೀಗ ಮೊಬೈಲ್ನಲ್ಲಿ ರಿಟ್ರೀವ್ ಮಾಡಿದ ಫೋಟೋ ಹರಿಬಿಡಲಾಗಿದೆ. ನ್ಯಾಯಾಲಯವೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ. ಇದಕ್ಕೆ ಕಾರಣೀಕರ್ತರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ತನಿಖೆ ಮಾಡಿಕೊಳ್ಳಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋವಿಡ್ ಇರಲಿ ಯಾವುದೇ ಸಂಗತಿ ಇರಲಿ, ರಾಜ್ಯ ಸರ್ಕಾರ ತನಿಖೆ ಮಾಡುವ ಸಂಪೂರ್ಣ ಅಧಿಕಾರ ಹೊಂದಿದೆ. ಆದರೆ, ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದು ಒಂದೂವರೇ ವರ್ಷ ಆದ ನಂತರ 2021- 22ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿ ಇಟ್ಟುಕೊಂಡು ತನಿಖೆಗೆ ಮುಂದಾಗಿರುವುದು ಆಶ್ಚರ್ಯಕರ ಸಂಗತಿ. ನೀವು ಕಳ್ಳತನ ಮಾಡಿ ಸಿಕ್ಕು ಬಿದ್ದಾಗ ಇನ್ನೊಬ್ಬರು ಕೂಡ ಕಳ್ಳತನ ಮಾಡಿದ್ದಾರೆ ಎಂದು ತೋರಿಸುತ್ತ ಬಚಾವಾಗುವ ತಂತ್ರವೇ? ಎಂದು ಪ್ರಶ್ನಿಸಿದ ಜೋಶಿ, ಇದೆಲ್ಲ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಮಹದಾಯಿ ತಿರಸ್ಕಾರಗೊಂಡಿಲ್ಲ: ಮಹದಾಯಿ ಯೋಜನೆ ಜಾರಿಗಾಗಿ ಆರಂಭದಿಂದಲೂ ಪ್ರಯತ್ನ ಮಾಡುತ್ತ ಬಂದಿರುವುದು ಬಿಜೆಪಿ ಹಾಗೂ ಎನ್‌ಡಿಎ ಸರ್ಕಾರ. ಇದುವರೆಗೆ ಏನೇ ಪ್ರಗತಿ ಆಗಿದ್ದರೂ ಅದು ನಮ್ಮ ಸರ್ಕಾರದಲ್ಲಿ. ಮುಂದೆಯೂ ಈ ಯೋಜನೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಯ ನೀಡಿದರು.
ಜುಲೈ 31ಕ್ಕೆ ನಡೆದ ವನ್ಯ ಜೀವಿ ಮಂಡಳಿ ಸಭೆಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಅಲ್ಲಿ ನಡೆದ ಚರ್ಚೆ ವೇಳೆ ಈ ಯೋಜನೆ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದವರು ಪ್ರತಿಕ್ರಿಯೆ ಕೊಡಬೇಕಿತ್ತು. ಅವರು ಕೊಟ್ಟಿಲ್ಲ. ಯೋಜನೆಗೆ ಅರಣ್ಯ ಭೂಮಿ ಕೊಡಬೇಕೆಂಬ ಪ್ರಸ್ತಾವನೆ ಇರುವುದರಿಂದ ಹಾಗೂ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ವಿಷಯವನ್ನು ವನ್ಯ ಜೀವಿ ಮಂಡಳಿಯವರು ಮುಂದೂಡಿದ್ದಾರೆ. ಆದರೆ, ಇದು ತಿರಸತ ಗೊಂಡಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.
ಈ ಎಲ್ಲ ವಿಷಯವನ್ನು ಕೇಂದ್ರ ಪರಿಸರ ಇಲಾಖೆ ಸಚಿವ ಭೂಪೇಂದ್ರ ಯಾದವ ಅವರೊಂದಿಗೆ ಮಾತನಾಡಿದ್ದೇನೆ. ಒಂದು ವೇಳೆ ರಾಜ್ಯ ಸರ್ಕಾರ ನಿಯೋಗ ತೆಗೆದುಕೊಂಡು ಬಂದರೆ ಸಚಿವರ ಜತೆ ಚರ್ಚೆಗೆ ಏರ್ಪಾಡು ಮಾಡುವುದಾಗಿ ಭರವಸೆ ನೀಡಿದರು.
ಈ ವರೆಗೂ ಒಂದು ಬಾರಿಯೂ ಮಹದಾಯಿ ವಿಷಯವನ್ನು ರಾಜ್ಯ ಸರ್ಕಾರ ಕೇಂದ್ರದ ಬಳಿ ತೆಗೆದುಕೊಂಡು ಬಂದಿಲ್ಲ. ಈಗ ಬಂದರೆ ಒಳ್ಳೆಯದು. ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಇರುವುದರಿಂದ ಪರಿಹಾರ ಕಂಡುಕೊಳ್ಳುವ ಯತ್ನವನ್ನು ಕೇಂದ್ರ ಮಾಡಲಿದೆ ಎಂದರು.