ಜಿಲ್ಲೆ

ಸೋಮಣ್ಣ 74ನೇ ಜನ್ಮದಿನಕ್ಕೆ 74 ಗಿಡ ನೆಡುವು ಕಾರ್ಯಕ್ರಮ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರು ಆದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ 74 ನೇ ಹುಟ್ಟು ಹಬ್ಬದ ಅಂಗವಾಗಿ ಜು.20 ರಂದು ಮಹಾ ನಗರಪಾಲಿಕೆ ಆವರಣದಲ್ಲಿ ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ವೃಕ್ಷಮಿತ್ರ ಪ್ರೊ.ಸಿದ್ದಪ್ಪ ನೇತೃತ್ವದಲ್ಲಿ 74 ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತಿದೆ.

ಕನ್ನಡಪರ ಸಂಘಟನೆಗಳು ಒಗ್ಗೂಡಿ ರಕ್ತದಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ವಿ.ಸೋಮಣ್ಣ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ವಿ.ಸೋಮಣ್ಣ ಅಭಿಮಾನಿ ಬಳಗ ಸಂಕಲ್ಪ ಮಾಡಿದೆ ಎಂದು ಬಳಗದ ಸಂಚಾಲಕ, ಕನ್ನಡ ಸೇನೆ ಅಧ್ಯಕ್ಷ ಧನಿಯಕುಮಾರ್​ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಹೊರಗಿನವರು ಎಂದು ಕೆಲವರು ಅಪಪ್ರಚಾರ ಮಾಡಿದ್ದರು. ಅವೆಲ್ಲವನ್ನೂ ಧಿಕ್ಕರಿಸಿ ಕ್ಷೇತ್ರದ ಜನತೆ 1.75 ಲಕ್ಷಕ್ಕು ಅಧಿಕ ಮತಗಳನ್ನು ನೀಡಿ ಗೆಲ್ಲಿಸಿದ್ದು ದಾಖಲೆಯೇ ಸರಿ. ಕೇಂದ್ರದ ಮಂತ್ರಿಯಾಗಿ ಕೇವಲ 35 ದಿನಗಳಲ್ಲಿ 350 ಕೋಟಿ ರೂ., ಅನುದಾನವನ್ನು ಜಿಲ್ಲೆಯ ಐದು ರೈಲ್ವೆ ಮೇಲ್ಸೇತುವೆಗಳಿಗೆ ಬಿಡುಗಡೆ ಮಾಡಿಸಿದ್ದಾರೆ. ಅಲ್ಲದೆ, ತುಮಕೂರು&ರಾಯದುರ್ಗ, ತುಮಕೂರು&ದಾವಣಗೆರೆ ರೈಲ್ವೆ ಯೋಜನೆಗೆ ವೇಗ ನೀಡಲು 600 ಕೋಟಿ ರೂ., ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿ ನಾನೊಬ್ಬ ಕೆಲಸಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

ಕ್ರೀಯಾಶೀಲ, ಕೆಲಸಗಾರ ಸೋಮಣ್ಣರ ಹುಟ್ಟು ಹಬ್ಬವನ್ನು ಕನ್ನಡಪರ ಸಂಘಟನೆಗಳು ಆರೋಗ್ಯ ಶಿಬಿರ ಹಮ್ಮಿಕೊಂಡು ಬಡ ಬಗ್ಗರಿಗೆ ಅನುಕೂಲ ಕಲ್ಪಿಸಲು ಹೊರಟಿದೆ. ಆರೋಗ್ಯ ಶಿಬಿರದಲ್ಲಿ ಸಿದ್ದಗಂಗಾ ಆಸ್ಪತ್ರೆಯ ಮಧುಮೇಹ, ಇಎನ್​.ಟಿ,ಕೀಲು ಮತ್ತು ಮೂಳೆ ತಜ್ಣರು, ಸ್ತ್ರೀ ರೋಗ ತಜ್ಞರು, ದಂತವೈದ್ಯರು,ಚರ್ಮರೋಗ, ಜನರಲ್​ ಫಿಜಿಷೀಯನ್​, ಆಯುರ್ವೇದ ತಜ್ಣ ವೈದ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

20 ರಂದು ಶ್ರೀಮಠಕ್ಕೆ ಭೇಟಿ: ಜನ್ಮದಿನ ಹಿನ್ನೆಲೆ ಕೇಂದ್ರ ಸಚಿವ ವಿ.ಸೋಮಣ್ಣ ಜು.20 ರಂದು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಂತರ ಸಿದ್ದಗಂಗಾ ಮಠಕ್ಕೆ ಆಗಮಿಸಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಪಾಲಿಕೆ ಆವರಣಕ್ಕೆ ಬಂದು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು, ಕೇಕ್​ ಕತ್ತಿರಿಸಿ ಅಲ್ಲಿಂದ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದು ಧನಿಯಾಕುಮಾರ್​ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ಪಾವಗಡ ಶ್ರೀರಾಮ, ಕನ್ನಡಸೇನೆ ಸಂತೋಷ, ಶಬ್ಬೀರ್​ ಅಹಮದ್​, ರಾಮಚಂದ್ರರಾವ್​, ಕೊಪ್ಪಲ್​ ನಾಗರಾಜು, ವೆಂಕಟಾಚಲ ಮತ್ತಿತರರು ಹಾಜರಿದ್ದರು.

ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ತುಮಕೂರು ವಿವಿಯೊಂದಿಗೆ ಸೇರಿ ಬಿದರೆಕಟ್ಟೆಯ ಹೊಸ ಕ್ಯಾಂಪಸ್​ ನಲ್ಲಿ 74 ವಿವಿಧ ಜಾತಿಯ ಹಣ್ಣಿನ ಗಿಡಗಳ ಜತೆಗೆ, 400 ಗಿಡಗಳನ್ನು ನೆಡಲು ತೀಮಾರ್ನ ಕೈಗೊಂಡಿದ್ದೇವೆ. ಆ ಮೂಲಕ ಸಚಿವರ ಜನ್ಮದಿನ ಆಚರಣೆಯನ್ನು ಅರ್ಥಪೂರ್ಣವಾಗಿಸಲಾಗುವುದು. ಪ್ರೊ.ಸಿದ್ದಪ್ಪ ವೃಕ್ಷಮಿತ್ರ