ಹುಬ್ಬಳ್ಳಿ: ವಿಕಸಿತ ಭಾರತದ ಆಶಯದೊಂದಿಗೆ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು "ಸಂಕಲ್ಪ ಪತ್ರ' ಎಂದು ಸ್ವೀಕಾರ ಮಾಡಿದ್ದು, ಅದರ ಮೂಲಕ ಸಾಮಾಜಿಕ, ತಾಂತ್ರಿಕ ಹಾಗೂ ಭೌತಿಕ ಸೌಲಭ್ಯಗಳ ಅಭಿವೃದ್ಧಿಯ ವಾಗ್ದಾನವನ್ನು ದೇಶದ ಜನರಿಗೆ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನರಾಮ್ ಮೇಘವಾಲ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಮುಸ್ಲಿಂ ತುಷ್ಟೀಕರಣದ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ಹೋಗುತ್ತಿದೆ. ಇದುವರೆಗೂ ಅವರು ಸುಳ್ಳು ಭರವಸೆಗಳನ್ನು ಕೊಡುತ್ತಲೇ ಚುನಾವಣೆ ಎದುರಿಸಿದ್ದಾರೆ. ಯಾವುದೇ ಅಭಿವೃದ್ಧಿ ಅವರಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಲೋಕಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ 273 ಸ್ಥಾನಗಳು ಬೇಕು. ಆದರೆ, ಕಾಂಗ್ರೆಸ್ ದೇಶದಲ್ಲಿ ಅಷ್ಟು ಸ್ಥಾನಗಳಿಗೆ ಸ್ಪರ್ಧೆಯನ್ನೇ ಮಾಡುತ್ತಿಲ್ಲ. ಇನ್ನು ಇಂಡಿಯಾ ಟಬಂಧನ್ದಲ್ಲಿರುವ ಸದಸ್ಯ ಪಕ್ಷ$ವೇ ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ ಮಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಾಣದ ಮುಸ್ಲಿಂರು ನಿಧಾನವಾಗಿ ಕಾಂಗ್ರೆಸ್ಗೆ ಮತ ಕೊಡುವುದನ್ನು ಕೈ ಬಿಟ್ಟರು. ಕಾಂಗ್ರೆಸ್ನಲ್ಲಿದ್ದ ಹಲವರು ಸಮಾಜವಾದಿ, ಬಹುಜನ ಸಮಾಜ ಪಾಟಿರ್ ಹಾಗೂ ತೃಣಮೂಲ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಈಗ ಅವರನ್ನು ಮರಳಿ ಪಕ್ಷಕ್ಕೆ ಕರೆತರಲು ಮತ್ತೆ ಮುಸ್ಲಿಂರ ಓಲೈಕೆ ಶುರು ಮಾಡಿದ್ದಾರೆ ಎಂದು ಆರೋಪಿಸಿದರು.
ಧರ್ಮಾಧಾರಿತ ಮೀಸಲಾತಿ:
ಈ ಮೊದಲು ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರು ದೇಶದ ಸಂಪತ್ತಿನ ಮೇಲೆ ಮುಸ್ಲಿಂರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. 1940ರಿಂದಲೂ ಕಾಂಗ್ರೆಸ್ ಇದನ್ನೇ ಹೇಳುತ್ತ ಬಂದಿದೆ. ಧರ್ಮಾಧಾರಿತ ಮೀಸಲಾತಿ ಬೇಡ ಎಂದು ಸ್ವತಃ ಸಂವಿಧಾನ ರಚಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೇ ಹೇಳಿದ್ದರು. ಅದೆಲ್ಲವನ್ನೂ ಮರೆತು ಕಾಂಗ್ರೆಸ್ ಈಗ ಮತ್ತೆ ಮುಸ್ಲಿಂರಿಗಾಗಿ ಸಂಪತ್ತಿನ ಹಂಚಿಕೆ ಬಗ್ಗೆ ಮಾತನಾಡುತ್ತಿದೆ ಎಂದು ಹರಿಹಾಯ್ದರು.
ಚುನಾವಣೆ ಘೋಷಣೆ ಆಗುವ ಕೆಲ ದಿನ ಮೊದಲು ಕಾಂಗ್ರೆಸ್ನವರು ವಕ್ಫ ಬೋರ್ಡ್ಗೆ ಆಸ್ತಿ ಪರಭಾರೆ ಮಾಡಿದ್ದಾರೆ. ತುಷ್ಟಿಕರಣವೊಂದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ದೇಶದ ಅಭಿವೃದ್ಧಿ ಕಾಂಗ್ರೆಸ್ಗೆ ಬೇಕಿಲ್ಲ ಎಂದರು.
ಬಿಜೆಪಿ ವಿಕಸಿತ ಭಾರತ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ಈ ಬಾರಿ ಲೋಕಸಭೆಯಲ್ಲಿ ಎನ್ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಲಭ್ಯವಾಗಲಿವೆ ಎಂದರು.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಎಸ್ಸಿ ಮೋರ್ಚಾದ ಬಸವರಾಜ ಅಮ್ಮಿನಭಾವಿ, ಗ್ರಾಮಾಂತರ ಜಿಲ್ಲಾ ವಕ್ತಾರ ಗುರು ಪಾಟೀಲ ಗೋಷ್ಠಿಯಲ್ಲಿದ್ದರು.