ಜಿಲ್ಲೆ

ಬೆಳಗಲಿದೆಯೇ ಬೆಳಗಾವಿ ಅಧಿವೇಶನ?

Davangere - Prakash Arali

ಮಧ್ಯ ಕರ್ನಾಟಕದ ಸಮಸ್ಯೆಗೆ ಸಿಕ್ಕೀತೆ ಚರ್ಚಾ ಜಗಲಿ? ನನಸಾಗದ ಹಲವು ದಶಕಗಳ ಕೂಗು ಜನಪ್ರತಿನಿಧಿಗಳ ಜಾಣ ಮೌನ
ಪ್ರಕಾಶ್ ಅರಳಿ, ದಾವಣಗೆರೆ
ಡಿಸೆಂಬರ್ ಮೊದಲ ವಾರದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕಲಾಪದಲ್ಲಿ ಮಧ್ಯ ಕರ್ನಾಟಕ ಎದುರಿಸುತ್ತಿರುವ ಅದೆಷ್ಟೋ ಸಮಸ್ಯೆಗಳು ಚರ್ಚೆಗೆ ಬರುತ್ತಲೇ ಇಲ್ಲ ಎಂಬ ಕೂಗು ಮತ್ತೆ ಹೆಡೆಬಿಚ್ಚಿದೆ.
ಹೌದು.., ಪ್ರಾದೇಶಿಕ ಅಸಮತೋಲನ ಸರಿದೂಗಿಸಲು ಶುರುವಾದ ಬೆಳಗಾವಿ ಅಧಿವೇಶನ ಕೇವಲ ಉತ್ತರ ಹಾಗೂ ದಕ್ಷಿಣ ಭಾಗದ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗುವ ಜತೆಗೆ ಜನಪ್ರತಿನಿಧಿಗಳ ಕಾಲಹರಣಕ್ಕೆ ಶಕ್ತಿಸೌಧದ ಸಾಮರ್ಥ್ಯ ಕ್ಷೀಣಿಸುತ್ತಿದೆ.
ಮಧ್ಯ ಕರ್ನಾಟದ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ ಸೇರಿ ನೆರೆಹೊರೆಯ ಜಿಲ್ಲೆಗಳಲ್ಲಿ ಹೊದ್ದು ಮಲಗುವಷ್ಟು ಸಮಸ್ಯೆಗಳಿವೆ. ದಶಕಗಳ ಕನಸುಗಳು ಕನಸಾಗೇ ಉಳಿದಿವೆ. ಈ ಭಾಗದ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಕಲಾಪದವರೆಗೂ ಒಯ್ದು ಸರ್ಕಾರದ ಗಮನ ಸೆಳೆಯುತ್ತಿಲ್ಲ ಎಂಬ ಅಸಮಾಧಾನದ ಕೂಗು ಇದ್ದೇ ಇದೆ. ಆದರೆ, ರಾಜಕಾರಣಿಗಳು ಮಾತ್ರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ.
ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಲಿ:
ಒಂದು ಕಾಲದಲ್ಲಿ ಕೈಗಾರಿಕೆಗಳ ವಲಯ, ಮ್ಯಾಂಚೆಸ್ಟರ್ ಸಿಟಿ ಎಂದೇ ಖ್ಯಾತಿಯಾಗಿದ್ದ ರಾಜ್ಯದ ಕೇಂದ್ರಬಿಂದು ಮಧ್ಯ ಕರ್ನಾಟಕದಲ್ಲಿ ಇಂದು ಹುಡುಕಿದರೂ ಬೆರಳೆಣಿಕೆಯಷ್ಟು ಕೈಗಾರಿಕೆಗಳು ಸಿಗುತ್ತಿಲ್ಲ. ಕಿರ್ಲೋಸ್ಕರ್, ಜವಳಿ ಕೈಗಾರಿಕೆಗಳು, ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಹತ್ತಾರು ಕೈಗಾರಿಕೆಗಳು ಕಣ್ಮರೆಯಾಗಿವೆ. ಹಾಗಾಗಿ ಮತ್ತೆ ಮಧ್ಯ ಕರ್ನಾಟಕ ಕೈಗಾರಿಕಾ ವಲಯವಾಗುವ ನಿಟ್ಟಿನಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಬೇಕಿದೆ.
ರಾಜಧಾನಿಯಾಗುವ ಎಲ್ಲ ಅರ್ಹತೆಗಳಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಧ್ಯ ಕರ್ನಾಟಕ ಇಬ್ಬಂದಿ ಸ್ಥಿತಿಯಲ್ಲಿದೆ. ಸಾರಿಗೆ, ಸ್ಥಳ, ವ್ಯಾಪಾರ ವಹಿವಾಟಿಗೆ ಇಡೀ ರಾಜ್ಯದಲ್ಲಿಯೇ ಮಧ್ಯ ಕರ್ನಾಟಕ ಸೂಕ್ತ ಸ್ಥಳ. ದಕ್ಷಿಣ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ದಾವಣಗೆರೆಯೇ ಹೆಬ್ಬಾಗಿಲು.
ಹೀಗಾಗಿ, ವಿಮಾನ ನಿಲ್ದ್ದಾಣ, ಸರ್ಕಾರಿ ವೈದ್ಯಕೀಯ ಕಾಲೇಜು, ಮೆಕ್ಕೆಜೋಳ ಸಂರಕ್ಷಣ ಘಟಕ, ಎಥೆನಾಲ್ ಘಟಕ, ಕೈಗಾರಿಕಾ ಕಾರಿಡಾರ್ ಯೋಜನೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ಹೆಚ್ಚಬೇಕಿದೆ.
ದಾವಣಗೆರೆಯಲ್ಲಿ ವಿಮಾನ ನಿಲ್ದ್ದಾಣ ಹಲವು ದಶಕಗಳ ಕನಸು. ಈ ಕುರಿತು ಸಚಿವರು, ಶಾಸಕರು ಇನ್ನಾದರೂ ಅಧಿವೇಶನದಲ್ಲಿ ಗಮನ ಸೆಳೆದು ನಗರದಲ್ಲಿ ಸೂಕ್ತ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಿದೆ.
ಮ್ಯಾಂಚೆಸ್ಟರ್ ಆಗಿದ್ದ ಬೆಣ್ಣೆನಗರಿ ಇಂದು ವಿದ್ಯಾಕಾಶಿಯಾಗಿದೆ. ಜಿಲ್ಲೆ, ರಾಜ್ಯ, ಹೊರ ರಾಜ್ಯ, ದೇಶಗಳಿಂದ ವಿದ್ಯಾರ್ಥಿಗಳು ಕಲಿಕೆಗೆ ದೇವನಗರಿಯತ್ತ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ದೃಷ್ಟಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.
ಮೆಕ್ಕೆಜೋಳ ಸಂಸ್ಕರಣ ಘಟಕ:
ಮೆಕ್ಕೆಜೋಳದ ಕಣಜವಾದ ಜಿಲ್ಲೆಯಲ್ಲಿ ಮೆಕ್ಕೆಜೋಳ ಆಧರಿತ ಸಂಸ್ಕರಣ ಘಟಕಗಳ ಅವಶ್ಯಕತೆ ಹೆಚ್ಚಿದೆ. ಕಬ್ಬು ಬೆಳೆದವರಿಗೆ ಶುಗರ್ ಫ್ಯಾಕ್ಟರಿ, ಭತ್ತ ಬೆಳೆದವರಿಗೆ ರೈಸ್‌ಮಿಲ್‌ಗಳಿವೆ. ಆದರೆ, ಮೆಕ್ಕೆಜೋಳ ಬೆಳೆದವರಿಗೆ ಕೃಷಿ ಆಧಾರಿತ ಕೈಗಾರಿಕೆಗಳಿಲ್ಲ. ಬೆಳ್ಳೂಡಿಯಲ್ಲಿ ಜರ್ಮನ್ ತಂತ್ರಜ್ಞಾನವುಳ್ಳ ಸಂಸ್ಕರಣ ಘಟಕವಿದೆ. ಆದರೆ, ಪರಿಣಾಮಕಾರಿಯಾಗಿ ರೈತರಿಗೆ ಲಾಭ ಸಿಗುತ್ತಿಲ್ಲ.
ರಾಜನಹಳ್ಳಿ 22 ಕೆರೆ ತುಂಬುವ ಯೋಜನೆ, ಸಾಸ್ವೇಹಳ್ಳಿ ಏತನೀರಾವರಿ, ಬೈರನಪಾದ ಏತ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಬಲ ತುಂಬಬೇಕಿದೆ.
ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಐದು ವರ್ಷಗಳಾಗುತ್ತಾ ಬಂದರೂ ನಿಗದಿತ ಪ್ರಮಾಣದಲ್ಲಿ ಅನುದಾನ ಬಳಕೆಯಾಗದೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಲಿಡಲು ಸಾಧ್ಯವಾಗದಷ್ಟು ಹದಗೆಟ್ಟ ರಸ್ತೆಗಳು ಇನ್ನಾದರೂ ಸ್ಮಾರ್ಟ್ ಆಗಬೇಕಿದೆ.
ಇನ್ನು ಚಿತ್ರದುರ್ಗ ಜಿಲ್ಲೆ ಬರಗಾಲವನ್ನೇ ಹೊದ್ದು ಮಲಗಿದ್ದು, ಶಾಶ್ವತ ಪರಿಹಾರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕಿದೆ. ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹದ ಜತೆಗೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ವಲಸೆ ತಪ್ಪುವ ಕೆಲಸ ಆಗಬೇಕಿದೆ. ಬೆಳೆ ವಿಮೆಯಲ್ಲಿ ಆಗುತ್ತಿರುವ ಲೋಪಕ್ಕೆ ಕಡಿವಾಣ ಹಾಕಬೇಕಿದೆ. ಹೀಗೆ ಅವಳಿ ಜಿಲ್ಲೆಗಳಲ್ಲಿ ಸಮಸ್ಯೆಗಳ ಪಟ್ಟಿ ದೊಡ್ಡದಿದ್ದು, ಅವುಗಳ ಪರಿಹಾರಕ್ಕೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕಂಡುಕೊಳ್ಳಬೇಕೆಂಬುದು ಈ ಪ್ರದೇಶದ ಜನರ ಕೂಗು.

ವಿದ್ಯುತ್ ಸಮಸ್ಯೆ ನೀಗಿಸಿ
ಕೃಷಿಗೆ ವಿದ್ಯುತ್ ಸಮಸ್ಯೆ ಇದೆ. ವಿದ್ಯುತ್ ಉತ್ಪಾದನೆ ಸಾಕಷ್ಟಿದ್ದರೂ ಸಮರ್ಪಕ ಲೈನ್ ವ್ಯವಸ್ಥೆ ಇಲ್ಲ. ಹೀಗಾಗಿ ಜಿಲ್ಲೆಯ ಅಲ್ಲಲ್ಲಿ ಸಬ್‌ಸ್ಟೇಶನ್‌ಗಳ (ಎಂಯುಎಸ್) ಅಗತ್ಯವಿದೆ. ಈಗಾಗಲೇ ದಾವಣಗೆರೆ ನಗರದಲ್ಲಿ ಆನಗೋಡು, ಮಾಯಕೊಂಡ, ಅತ್ತಿಗೆರೆ, ಕುಕ್ಕವಾಡ, ದಾವಣಗೆರೆಯಲ್ಲಿ ತಲಾ ಒಂದೊಂದು ಸಬ್‌ಸ್ಟೇಶನ್ ಇವೆ.
ನಿರಂತರ ವಿದ್ಯುತ್ ನೀಡಿದರೆ ಓವರ್‌ಲೋಡ್‌ನಿಂದ ಲೈನ್‌ಗಳು ತಡೆಯುತ್ತಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಸಬ್‌ಸ್ಟೇಶನ್ ಸ್ಥಾಪಿಸಿ ಲೈನ್ ಬದಲಾವಣೆ ಮಾಡುವ ಅಗತ್ಯವಿದೆ.
ಇನ್ನಾದರೂ ಜನಪ್ರತಿನಿಧಿಗಳು ಬೆಳಗಾವಿ ಅಧಿವೇಶನದಲ್ಲಿ ಮಧ್ಯಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ದನಿ ಎತ್ತಬೇಕಿದೆ.

ಸರ್ಕಾರ ಮೊದಲು ರೈತರಿಗೆ ನೀರು, ವಿದ್ಯುತ್ ಗ್ಯಾರಂಟಿ ಕೊಡಬೇಕು. ಜತೆಗೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಅಧಿವೇಶನದಲ್ಲಿ ಚರ್ಚಿಸಿ ಸ್ವಾಮಿನಾಥನ್ ವರದಿ ಜಾರಿಗೆ ಸರ್ಕಾರ ಆದ್ಯತೆ ನೀಡಬೇಕು.
ಚನ್ನಬಸಪ್ಪ, ಪ್ರ.ಕಾರ್ಯದರ್ಶಿ, ರಾಜ್ಯ ರೈತಸಂಘ, ದಾವಣಗೆರೆ

ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ರೈತನಿಗೆ ಭೂಮಿ, ನೀರು, ವಿದ್ಯುತ್ ಜತೆಗೆ ವೈಜ್ಞಾನಿಕ ಬೆಲೆ ನೀಡಬೇಕು. ಕೃಷಿ ಇಲ್ಲದೆ ದೇಶ ಉಳಿಯಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು. ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಸ್ಥಾಪನೆಯಾಗಿ 16 ವರ್ಷ ಕಳೆದವು. ಇದುವರೆಗೂ ಕೆರೆಗಳಿಗೆ ನೀರು ಹರಿದು ಬಂದಿಲ್ಲ. ಚಳ್ಳಕೆರೆ ತಾಲೂಕಲ್ಲೇ 73 ಕೆರೆಗಳಿವೆ. 51 ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಚುನಾವಣಾ ಪೂರ್ವ ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿವರೆಗೂ ನೀರು ತುಂಬಿಸಿಲ್ಲ.
ರೆಡ್ಡಿಹಳ್ಳಿ ವೀರಣ್ಣ, ಉಪಾಧ್ಯಕ್ಷ, ರಾಜ್ಯ ರೈತ ಸಂಘ, ಚಳ್ಳಕೆರೆ