ಜಿಲ್ಲೆ

ಕೇಂದ್ರ ಸರ್ಕಾರದಿಂದ ಶ್ರಮಿಕರ ಶೋಷಣೆ

ಸಿಂಧನೂರು: ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸುವಂತೆ ರೈತರು ಆಗ್ರಹಿಸುತ್ತಿದ್ದರೂ ಗಮನಹರಿಸದ ಪ್ರಧಾನಿ ನರೇಂದ್ರ ಮೋದಿ, ದೇಶದ ಹಿಂದು ಮಹಿಳೆಯರ ಮಂಗಳಸೂತ್ರವನ್ನು ಪರೋಕ್ಷವಾಗಿ ಕಸಿಯುತ್ತಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

ನಗರದ ರೈತ ಭವನದಲ್ಲಿ ಲ್ಲಿ ಎಐಟಿಯುಸಿಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ ಕೃಷಿ ಕುಟುಂಬಗಳು ಮನೆಯ ಯಜಮಾನನನ್ನು ಕಳೆದುಕೊಳ್ಳುತ್ತಿವೆ. ಮಂಗಳಸೂತ್ರದ ಬಗ್ಗೆ ಮಾತನಾಡುವ ಮೋದಿ, ರೈತರ ಬೇಡಿಕೆಯನ್ನು ಈಡೇರಿಸದೆ ಹಿಂದು ಮಹಿಳೆಯರ ತಾಳಿಯನ್ನು ಕಸಿಯುತ್ತಿರುವವರು ಯಾರು ಎಂಬುದನ್ನು ಹೇಳಬೇಕು ಎಂದರು.

ಮೋದಿ ಸರ್ಕಾರ ಈ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ರೈಲ್ವೆ, ಬಂದರು, ವಿಮಾನ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಉದ್ಯಮಗಳನ್ನು ರಾಷ್ಟ್ರೀಯ ನಗದೀಕರಣದ ಮೂಲಕ ಖಾಸಗಿ ಉದ್ಯಮಿಗಳಿಗೆ ಗುತ್ತಿಗೆ ನೀಡುತ್ತಿದೆ. ಈ ದೇಶದ ಜನರ ಶ್ರಮದಿಂದ ಕಟ್ಟಿ ಬೆಳೆಸಿದ ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಪಾಲಾಗುತ್ತಿವೆ. ಕಾರ್ಮಿಕ ವಿರೋಧಿ ಲೇಬರ್ ಕೋಡ್ ಜಾರಿಗೆ ತರುವ ಮೂಲಕ ಶ್ರಮಿಕರನ್ನು ಶೋಷಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು. ಡಿ.ಎಚ್.ಕಂಬಳಿ ಇತರರಿದ್ದರು.