ಹೊನ್ನಾಳಿ: ದೇಶವನ್ನು ಎಲ್ಲ ರಂಗದಲ್ಲಿ ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ದವರಲ್ಲಿ ವಾಜಪೇಯಿ, ಲಾಲ್ ಬಹದ್ದೂರು ಶಾಸ್ತ್ರಿ ಬಿಟ್ಟರೆ ಪ್ರಧಾನಿ ನರೇಂದ್ರ ಮೋದಿಯವರೇ ನಂತರದ ಅಭಿವೃದ್ಧಿ ಹರಿಕಾರರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣ್ಣಿಸಿದರು.
ತಾಲೂಕಿನ ಕತ್ತಿಗಿ, ಮಾದೇನಹಳ್ಳಿ, ತುಗ್ಗಲಹಳ್ಳಿ, ಸೊರಟೂರ, ಸುಂಕದಕಟ್ಟೆ, ಅರಬಗಟ್ಟೆ, ದಿಡಗೂರು, ಬಿದರಗಡ್ಡೆ, ಹೊಳೆಮಾದಾಪುರ, ಬಲಮುರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ವಿತರಿಸಿ ಅವರು ಮಾತನಾಡಿದರು.
ಕಳೆದ 9 ವರ್ಷಗಳಿಂದ ದೇಶದ ದುರ್ಬಲ ವರ್ಗದವರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರವಧಿಯಲ್ಲಿ ಕಿಂಚಿತ್ತು ಕಪ್ಪುಚುಕ್ಕೆ ಪಡೆಯದ ಏಕೈಕ ಪ್ರಧಾನಿಯಾಗಿದ್ದಾರೆಂದರು.
2014ರಿಂದ ಇಲ್ಲಿವರೆಗೆ ವಿದೇಶದಲ್ಲಿದ್ದ 231 ಕಲಾಕೃತಿಗಳನ್ನು ವಾಪಸ್ ತಂದಿದ್ದಾರೆ. ಏಕತಾ ಪ್ರತಿಮೆ ನಿರ್ಮಿಸಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲರಿಗೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.
ಶ್ರೀರಾಮ ಜನ್ಮಭೂಮಿ ಪುನರ್ ನಿರ್ಮಾಣ, ಸೋಮನಾಥ ದೇವಸ್ಥಾನದ ನವೀಕರಣ, ಕೇದಾರನಾಥ ಧಾಮ್ ಮರು ಅಭಿವೃದ್ಧಿ, ಕಾಶಿ ವಿಶ್ವನಾಥ ಧಾಮ್ ಪುನರುಜ್ಜೀವನ ಹಾಗೂ ಉಜ್ಜೈನ್ ಮಹಾಕಾಲ ದೇವಸ್ಥಾನದ ಕಾರಿಡಾರ್ ಪುನಶ್ಚೇತನ ಹೀಗೆ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ಕೊಟ್ಟು ವಿದೇಶಿಯರನ್ನು ಸೆಳೆದಿದ್ದಾರೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಶಿವಾನಂದ್, ಮುಖಂಡರಾದ ಬಸವರಾಜ್ ಮತ್ತಿತರರಿದ್ದರು.