ಜಿಲ್ಲೆ

ಕೇಂದ್ರದ ಯೋಜನೆಗಳ ಮಾಹಿತಿ ವಾಹನಕ್ಕೆ ಚಾಲನೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಸವಲತ್ತುಗಳು ದೊರಕಬೇಕು ಎಂಬುದಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿಯ ಘಂಟಿಕೇರಿ ಓಣಿಯಲ್ಲಿ ವಿಕಸಿತ ಭಾರತ ಯಾತ್ರೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಪ್ರತಿ ಹಳ್ಳಿಯೂ ಅಭಿವೃದ್ಧಿಯಾದರೆ ಮಾತ್ರ ಭಾರತ ಅಭಿವೃದ್ಧಿಯಾಗಲು ಸಾಧ್ಯ. ಈ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಧಾನಿ ಕೆಲಸ ಮಾಡುತ್ತಿದ್ದಾರೆ ಎಂದರು.

ದೇಶದ ಬಡವರ ಸಂಕಷ್ಟ, ರೈತರ ಸಮಸ್ಯೆಗಳನ್ನು ಅರಿತು ಪ್ರಧಾನಿಯವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ್ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ನಡೆಯಲಿದೆ ಎಂದರು.

ಕೇಂದ್ರದ ಯೋಜನೆಗಳನ್ನು ವಿಡಿಯೋ ಮೂಲಕ ಮಾಹಿತಿ ನೀಡುವ ವಾಹನದಲ್ಲಿ ವೀಕ್ಷಣೆ ಮಾಡಿದರು.

ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಡಾ. ಕ್ರಾಂತಿಕಿರಣ, ಹಿರಿಯರಾದ ಗುರಯ್ಯ ಸಾಲಿಮಠ, ಬಸವರಾಜ ಜಾಬೀನ, ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ ಘೋಡಕೆ, ನೀಲಕಂಠ ತಡಸದಮಠ, ಗಣೇಶ ಅಮರಾವತಿ, ಪದ್ಮಾವತಿ ಚಿಗನಾಂಪಲ್ಲಿ, ಮಧು ಉಪ್ಪಿನ, ಪೂಜಾ ರುದ್ರಾಪುರ, ಶಿವಾನಂದ ಅಂಬಿಗೇರ, ಹಿರಿಯರು, ಯುವಕರು ಹಾಗೂ ಇತರರು ಭಾಗವಹಿಸಿದ್ದರು.