ಜಿಲ್ಲೆ

ರೈತರ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರ

ಯಲ್ಲಾಪುರ: ವಿದೇಶದಿಂದ ಅಡಕೆ ಆಮದಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಖಂಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ಅಡಕೆಯನ್ನು ಆಮದು ಮಾಡಿಕೊಂಡು, ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಅಡಕೆ ಹಾಗೂ ಬೆಳೆಗಾರರ ಮಾನ ಹರಾಜಾಗಿದೆ. ಕೊಳೆರೋಗ, ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರ ಮೇಲೆ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು.

ರೈತರಿಗೆ ಅನ್ಯಾಯವಾಗುತ್ತಿದ್ದರೂ ಸ್ಥಳೀಯ ಸಂಸದರು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದು, ಆಮದು ಸುಂಕ ಏರಿಸಿ ರೈತರ ರಕ್ಷಣೆಗೆ ಮುಂದಾಗಬೇಕು. ಅಡಕೆ ದರ ಹೀಗೆಯೇ ಇಳಿಮುಖವಾಗುತ್ತ ಹೋದರೆ, ಉಳಿದೆಲ್ಲ ಬೆಳೆಗಾರರಂತೆ ಅಡಕೆ ಬೆಳೆಗಾರರೂ ಆತ್ಮಹತ್ಯೆಯ ದಾರಿ ಹಿಡಿಯುವ ಅಪಾಯವಿದೆ ಎಂದು ಎಚ್ಚರಿಸಿದರು.

ಡಾ. ರವಿ ಭಟ್ಟ ಬರಗದ್ದೆ ಮಾತನಾಡಿ, ರಾಜ್ಯ ಸರ್ಕಾರಗಳು ತಿರಸ್ಕರಿಸಿದರೂ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಪದೇ ಪದೆ ಒತ್ತಡ ಹೇರುತ್ತಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರದ ಹೇರಿಕೆಯ ನೀತಿ ಕರಾವಳಿ, ಮಲೆನಾಡಿನ ಭಾಗದ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದೆ. ಇದನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಪ್ರಮುಖರಾದ ನರ್ಮದಾ ನಾಯ್ಕ, ಪ್ರೇಮಾನಂದ ನಾಯ್ಕ, ಉಲ್ಲಾಸ ಶಾನಭಾಗ, ಲಾರೆನ್ಸ್ ಸಿದ್ದಿ, ವಿ.ಎಸ್. ಭಟ್ಟ, ಪೂಜಾ ನೇತ್ರೆಕರ್, ಸರಸ್ವತಿ ಗುನಗಾ, ವೆಂಕಟರಮಣ ಭಾಗ್ವತ, ಪ್ರಶಾಂತ ಸಭಾಹಿತ ಇತರರಿದ್ದರು.