ಅಡ್ಡಗದ್ದೆ ಗ್ರಾಮದಲ್ಲಿ ಕೃಷಿಕರು, ಗಣ್ಯರನ್ನು ಸನ್ಮಾನಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶ್ರೀನಿವಾಸ್ ಭಟ್, ರಾಮಪ್ಪ ಗೌಡ, ನಾಗರತ್ನಾ, ಅಶ್ವಿನಿ, ಪುಷ್ಪಾ ಇತರರಿದ್ದರು. 
ಜಿಲ್ಲೆ

54 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ನೆರವು

ಶೃಂಗೇರಿ: ದೇಶದ 54 ಲಕ್ಷ ಕೃಷಿಕರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವರ್ಷಕ್ಕೆ 6 ಸಾವಿರ ರೂ. ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ನರೇಂದ್ರ ಮೋದಿ ಎಂಬ ರಾಷ್ಟ್ರಭಕ್ತನಿಂದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮಂಗಳವಾರ ಅಡ್ಡಗದ್ದೆ ಗ್ರಾಪಂ ಮತ್ತು ಗ್ರಾಮ ಭಾರತ್ ವೇದಿಕೆ ಟ್ರಸ್ಟ್ ಸಹಯೋಗದಲ್ಲಿ ರೈತನಿಧಿ-ಜ್ಞಾನನಿಧಿ ಹಾಗೂ ಸೈನಿಕ-ಸಾಧಕ ರೈತ-ಮೆಸ್ಕಾಂ ಸಿಬ್ಬಂದಿ ಸಮ್ಮಾನ್ ಎಂಬ ಐದು ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಉಚಿತ ಅಡುಗೆ ಅನಿಲ ಹಾಗೂ 18 ಸಾವಿರ ಹಳ್ಳಿಗಳಿಗೆ ಉಚಿತ ವಿದ್ಯುತ್ ಭಾಗ್ಯ ನೀಡಿದೆ ಎಂದರು.
ದೇಶಕ್ಕಾಗಿ ಸೈನಿಕರು ಪ್ರಾಣತ್ಯಾಗ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ವಾಸವಾಗಿರುವ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿ ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಶಿಕ್ಷೆ ವಿಧಿಸುವಂತಾಗಬೇಕು ಎಂದರು.
ಗ್ರಾಮ್ ಭಾರತ್ ವೇದಿಕೆ ಟ್ರಸ್ಟ್ ಮುಖ್ಯಸ್ಥ ರಂಜಿತ್ ಶೃಂಗೇರಿ ಮಾತನಾಡಿ, ನಗರಗಳು ಬೆಳೆಯುತ್ತಿವೆ. ಹಳ್ಳಿಗಳು ಸೊರಗುತ್ತಿವೆ. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಜತನದಿಂದ ಕಾಪಾಡಿಕೊಂಡ ಕೃಷಿಕ ಕುಟುಂಬಗಳು ಮರೆಯಾಗುತ್ತಿವೆ. ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮ ಭಾರತ್ ಟ್ರಸ್ಟ್ ಹಾಗೂ ಅಡ್ಡಗದ್ದೆ ಗ್ರಾಪಂ ಐದು ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಬದುಕಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು.
ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹಂಚಲಿ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೇ ಗ್ರಾಪಂಗಳ ಮೊದಲ ಕರ್ತವ್ಯವಾಗಬೇಕು. ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಗ್ರಾಪಂಗೆ ಶ್ರೇಷ್ಠ ಸ್ಥಾನವಿದೆ. ಜನಪ್ರತಿನಿಧಿಗಳು ಪಕ್ಷಭೇದ ಮರೆತು ಜನಸ್ನೇಹಿಗಳಾದರೆ ಮಾತ್ರ ದೇಶದ ಉನ್ನತೀಕರಣ ಸಾಧ್ಯ. ಗ್ರಾಪಂಗಳು ಅಭಿವೃದ್ಧಿ ಪಥದಲ್ಲಿ ಸಾಗಿದಾಗ ಮಾತ್ರ ವಿಶ್ವಗುರು ಭಾರತದ ಕನಸು ನನಸಾಗಲು ಸಾಧ್ಯ ಎಂದು ತಿಳಿಸಿದರು.
ರೈತರು, ಸೈನಿಕರು ಹಾಗೂ ಮೆಸ್ಕಾಂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕ್ಯಾಪ್ಟನ್ ಎಸ್.ಎ.ಗೋಪಾಲ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಅಡ್ಡಗದ್ದೆ ಗ್ರಾಪಂ ಉಪಾಧ್ಯಕ್ಷೆ ವಿನೋದಾ ಆಚಾರ್, ಸದಸ್ಯರಾದ ಸುಂದರೇಶ್ ಹೆಬ್ಬಿಗೆ, ಶಾಂತಾ ಮಂಜಪ್ಪ, ಪುಷ್ಪಾ ಜನಾರ್ದನ್, ಕೃಷ್ಣಮೂರ್ತಿ ಆಚಾರ್, ನಾಗರತ್ನಾ, ಶೈಲೇಶ್‌ಕುಮಾರ್, ಅಶ್ವಿನಿ ಇದ್ದರು.