ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಜ್ಜೆ ಬೆಳೆ ಹಾನಿ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದರು. ಸಂಸದ ಸಂಗಣ್ಣ ಕರಡಿ, ಡಿಸಿ ನಲಿನ್ ಅತುಲ್, ಅಧ್ಯಯನ ತಂಡದ ಅಧಿಕಾರಿಗಳಿದ್ದರು.  
ಜಿಲ್ಲೆ

ಕೇಂದ್ರ ತಂಡದಿಂದ ಬರ ಅಧ್ಯಯನ:ಅಳಲು ತೋಡಿಕೊಂಡ ರೈತರು

CENTRAL DROUGHT TEAM VISIT KOPPAL FARMERS FIELD

Kopala - Raveendra V K

ಕೊಪ್ಪಳ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ತಂಡ ಕುಷ್ಟಗಿ, ಯಲಬುರ್ಗಾ ಹಾಗೂ ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿತು.

ಕೇಂದ್ರ ಕುಡಿವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್, ಪಶುಸಂಗೋಪನೆ ಇಲಾಖೆ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ತಂಡವು

ಗಜೇಂದ್ರಗಡ ಮಾರ್ಗವಾಗಿ ಮೊದಲು ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ರೈತ ಮಹಿಳೆ ಶರಣಮ್ಮ ರೊಟ್ಟಿ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಎಕರೆಗೆ 15-20 ಸಾವಿರ ವೆಚ್ಚವಾಗಿದೆ. ಬೆಳೆ ಬಂದಿಲ್ಲ. ಸಂಕಷ್ಟ ಎದುರಾಗಿದ್ದು, ಪರಿಹಾರ ಕೊಡಿಸುವಂತೆ ಶರಣಮ್ಮ ಮನವಿ ಮಾಡಿದರು.

ಅಧಿಕಾರಿಗಳು ಮಳೆ, ಬಿತ್ತನೆ, ಕೃಷಿ ಚಟುವಟಿಕೆ ವೆಚ್ಚ, ರೈತರ ಪರಿಸ್ಥಿತಿ ಬಗ್ಗೆ ವಿಚಾರಿಸಿ ಮಾಹಿತಿ ದಾಖಲಿಸಿಕೊಂಡರು.

ಕುಷ್ಟಗಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದ್ದು, ಜಿಲ್ಲಾಡಳಿತ ಬಹುಪಾಲು ಕುಷ್ಟಗಿ ತಾಲೂಕಿನ ಗ್ರಾಮಗಳನ್ನೇ ವೀಕ್ಷಣೆಗೆ ಆಯ್ಕೆ ಮಾಡಿಕೊಂಡು ಪರಿಶೀಲನೆಗೆ ಅನುವು ಮಾಡಿಕೊಟ್ಟಿತು. ಬಂಡಿಯಿಂದ ಹನುಮಸಾಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಬೆಳೆ ಸ್ಥಿತಿ ಕಣ್ಣಾರೆ ಕಂಡರು.

ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶ, ಹಾನಿ ವಿವರ, ಮಳೆ ಪ್ರಮಾಣ, ನಷ್ಟ ಮಾಹಿತಿ ಪಡೆದುಕೊಂಡರು. ಹನುಮಸಾಗರ ಹೋಬಳಿ ಬಳಿಕ ರಾಷ್ಟ್ರೀಯ ಹೆದ್ದಾರಿ ಮೂಲಕ ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾಕ್ಕೆ ಆಗಮಿಸಿ ಕೃಷಿ ಬೆಳೆಗಳು ಹಾಗೂ ನರೇಗಾ ಕಾಮಗಾರಿಗಳನ್ನು ವೀಕ್ಷಿಸಲಾಯಿತು.

ಪರಿಸ್ಥಿತಿ ವಿವರಿಸಿದ ರೈತರು: ನಂತರ ಕೊಪ್ಪಳ ತಾಲೂಕಿನ ಇರಕಲ್ ಗಡಾ ಹೋಬಳಿಯ ಮೆತಗಲ್ ಗ್ರಾಮದ ಹನುಮಪ್ಪ ಶಂಕ್ರಪ್ಪ ಹೊಲ, ಅಲ್ಲಿಂದ ಬಿ.ಹೊಸಳ್ಳಿ ಗ್ರಾಮದ ಕೃಷ್ಣಪ್ಪ ರಾಥೋಡ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಲಾಯಿತು.

ರೈತರು ಮೆಕ್ಕೆಜೋಳ, ಸಜ್ಜೆ ಹಾಗೂ ಇನ್ನಿತರ ಬೆಳೆಗಳನ್ನು ಕೈಯಲ್ಲಿ ಹಿಡಿದು ಪರಿಸ್ಥಿತಿ ವಿವರಿಸಿದರು. ಸೂಕ್ತ ಪರಿಹಾರ ಕೊಡಿಸುವಂತೆ ಅಧಿಕಾರಿಗಳಿಗೆ ಕೈ ಮುಗಿದು ಕೇಳಿಕೊಂಡರು.

ತಂಡವು ಹಿಟ್ನಾಳ್ ಟೋಲ್ ಮಾರ್ಗವಾಗಿ ವಿಜಯ ನಗರ ಜಿಲ್ಲೆಗೆ ತೆರಳಿತು. ಸಂಸದ ಸಂಗಣ್ಣ ಕರಡಿ, ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.