ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ್, ವಿಶ್ವನಾಥ್ ಕಾಶಿ ಇದ್ದರು. 
ಜಿಲ್ಲೆ

ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ

ನವೀನ ಬಿ.ಎಂ

ಶಿವಮೊಗ್ಗ: ಶಿಕ್ಷಣ ಇಲಾಖೆಗೆ ನೀಡುವ ಕೇಂದ್ರದ ಅನುದಾನದಲ್ಲಿ ತಾರತಮ್ಯ ಆಗುತ್ತಿದೆ. ಹಾಗಾಗಿ ಶೀಘ್ರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗಿದೆ. ಉತ್ತರ ಭಾರತದ ವಿಚಾರವನ್ನು ನಮ್ಮ ರಾಜ್ಯದ ಪಠ್ಯಗಳಲ್ಲಿ ಸೇರಿಸುವುದು ಸರಿಯಲ್ಲ. ರಾಜ್ಯದ ಪ್ರತಿ ಮಕ್ಕಳಿಗೂ ಕೇಂದ್ರದಿಂದ 2,800 ರೂ. ಬರುತ್ತಿದೆ. ಇದು ಯಾವುದಕ್ಕೂ ಸಾಲುತ್ತಿಲ್ಲ. ನಮ್ಮ ರಾಜ್ಯದಿಂದ ಸಾಕಷ್ಟು ತೆರಿಗೆ ಸಂಗ್ರಹವಾಗುತ್ತಿದ್ದರೂ ಅನುದಾನ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರ ಡಬಲ್ ಎಂಜಿನ್ ಅಂತ ಹೇಳುತ್ತಲೇ ಬಂದಿತು. ಅನುದಾನ ಹೆಚ್ಚಿಗೆ ತರಲು ಅವರಿಂದ ಆಗಲೇ ಇಲ್ಲ. ನಾವು ಕೇಂದ್ರಕ್ಕೆ ಹೆಚ್ಚಿನ ಅನುದಾನ ಕೇಳುತ್ತಿದ್ದೇವೆ. ಈಗಾಗಲೇ ಕೇಂದ್ರ ಶಿಕ್ಷಣ ಸಚಿವರನ್ನು ಸಂಪರ್ಕ ಮಾಡಿದ್ದು ಆದಷ್ಟು ಬೇಗ ಭೇಟಿಯಾಗಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು ಎಂದರು. ಪಕ್ಷದ ಪ್ರಮುಖರಾದ ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ್, ವಿಶ್ವನಾಥ್ ಕಾಶಿ ಇದ್ದರು.