ಬೆಂಗಳೂರು: ದೇವನಹಳ್ಳಿ ತಾಲೂಕಿನಲ್ಲಿ ವಿವಿಧ ಯೋಜನೆ ಮತ್ತು ಕಟ್ಟಡ ಕಾಮಗಾರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಚಾಲನೆ ನೀಡಿದರು.
ಆವತಿ ಗ್ರಾಮದ 35 ಎಕರೆ ಪ್ರದೇಶದಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರಿನ ಸೆಂಟ್ರಲ್ ಡಿಟೆಕ್ಟಿವ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ (ಸಿಡಿಟಿಐ) ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ (ಸ್ಮಾಟ್ ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನದೊಂದಿಗೆ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈ ಕೇಂದ್ರದಲ್ಲಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಒಗಳು ಹಾಗೂ ಸಿಎಪಿಎಫ್ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೋರ್ಸ್ ಒದಗಿಸುವ ಉದ್ದೇಶ ಹೊಂದಲಾಗಿದೆ.
ಕೇಂದ್ರೀಯ ಪತ್ತೆದಾರಿ ತರಬೇತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಆವತಿ ಗ್ರಾಮದಿಂದ ಅತ್ತಿಬೆಲೆ ಸಮೀಪದ ಅನಂತ ವಿದ್ಯಾನಿಕೇತನ ಶಾಲಾ ಆವರಣಕ್ಕೆ ತೆರಳಿದ ಅಮಿತ್ ಶಾ, ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಬೆಂಗಳೂರಿನಲ್ಲಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪ್ರಾದೇಶಿಕ ಪ್ರಧಾನ ಕಚೇರಿಯ ಹಲವು ಯೋಜನೆಗಳನ್ನು ಉದ್ಘಾಟಿಸಿದರು. 120 ಸೈನಿಕರ ಬ್ಯಾರಕ್ಗಳು, 42 ವಸತಿ ಕಟ್ಟಡಗಳು, ಜಂಟಿ ಆಡಳಿತಾತ್ಮಕ ಕಟ್ಟಡಗಳು ಹಾಗೂ ಅಧಿಕಾರಿಗಳ ಹಾಗೂ ಅಧೀನ ಅಧಿಕಾರಿಗಳ ಮೆಸ್ ಅನ್ನು ಆನ್ಲೈನ್ ಮೂಲಕ ಉದ್ಘಾಟಿಸಿದರು.